ಮಗಳು ಮದುವೆ (Marriage) ಆಗಿದ್ದರೂ ಪ್ರಿಯತಮನೊಂದಿಗೆ (lover) ಕಾಣಿಸಿಕೊಂಡಿದ್ದನ್ನು ಕಂಡು ಆಕ್ರೋಶಗೊಂಡ ತಂದೆ ತನ್ನ ಭಾವಮೈದುನನ ಜೊತೆ ಸೇರಿ ಆ್ಯಸಿಡ್ (Acid) ಸುರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿಯಲ್ಲಿ ನಡೆದಿದೆ. ಮದುವೆಯಾದ 2 ದಿನಗಳಲ್ಲಿ ಯುವತಿ ತನ್ನ ಪ್ರಿಯಕರನೊಂದಿಗೆ ಮಾತನಾಡುವುದನ್ನು ಕಂಡ ನಂತರ ತಂದೆಯೇ ಮಗಳೆನ್ನುವುದನ್ನು ನೋಡದೆ ಕೊಲೆ (Murder) ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ.
ದೆಹಲಿ-ಲಕ್ನೋ ರಾಷ್ಟ್ರೀಯ ಹೆದ್ದಾರಿಯಲ್ಲಿ 25 ವರ್ಷದ ಯುವತಿ ನಗ್ನಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಘಟನೆಯಲ್ಲಿ ಶೇ 40 ರಷ್ಟು ದೇಹದ ಭಾಗ ಸುಟ್ಟಿತ್ತು. ಇದನ್ನು ಕಂಡ ತಕ್ಷಣ ಸ್ಥಳೀಯರು ಪೊಲೀಸರಿಗೆ (Police) ಮಾಹಿತಿ ನೀಡಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಆಕೆಯ ತಂದೆ ಮತ್ತು ಸೋದರ ಮಾವ ಯುವತಿಯನ್ನು ಹತ್ಯೆ ಮಾಡುವ ಸಲುವಾಗಿ ಆ್ಯಸಿಡ್ ಎರಚಿದ್ದಾರೆ ಎಂಬುವುದು ಬಯಲಿಗೆ ಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಯುವತಿ ತಾನು ಪಕ್ಕದ ಮನೆಯ ಯುವಕನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ವಿವಾಹ ಮಾಡಿಸುವಂತೆ ಮನವಿ ಮಾಡಿದ್ದಾಳೆ. ಇದಕ್ಕೆ ಯುವತಿ ತಂದೆ ತೋತರಾಮ್ ಹಾಗೂ ಸೋದರಮಾವ ದಿನೇಶ್ ಕುಮಾರ್ ವಿರೋಧ ವ್ಯಕ್ತಪಡಿಸಿ, ಬೇರೆಯವರೊಂದಿಗೆ ವಿವಾಹ ಮಾಡಿಸಿದ್ದಾರೆ.
ಬೇರೆಯವರೊಂದಿಗೆ ಮದುವೆ ಆದ ನಂತರವೂ ಯುವತಿ ತನ್ನ ಪ್ರಿಯಕರನ ಜತೆ ಹೋಗುವುದಾಗಿ ತಂದೆಯೊಂದಿಗೆ ಹೇಳಿದ್ದಾಳೆ. ಅಲ್ಲದೆ ಆಗಾಗ್ಗೆ ಮೊಬೈಲ್ನಲ್ಲಿ ಮಾತನಾಡುವುದನ್ನು ಆರಂಭಿಸಿದ್ದಾಳೆ. ಇದಕ್ಕೆ ಕುಪಿತಗೊಂಡ ತಂದೆ ಹಾಗೂ ಸೋದರಮಾವ ಆಕೆಯನ್ನು ಸಾಯಿಸುವ ನಿರ್ಧಾರ ಮಾಡಿದ್ದಾರೆ.
ಮಗಳನ್ನು ಹೊರ ಹೋಗೋಣವೆಂದು ಕರೆದುಕೊಂಡ ಬಂದ ತಂದೆ ಮತ್ತು ಸೋದರ ಮಾವ ಹೈವೇ ಮಧ್ಯದಲ್ಲಿ ಟಾಯ್ಲೆಟ್ ಕ್ಲೀನ್ ಮಾಡಲು ಬಳಸುವ ಆ್ಯಸಿಡ್ ಅನ್ನು ಬಾಯಿಗೆ ಮತ್ತು ದೇಹದ ಮೇಲೆ ಸುರಿದಿದ್ದಾರೆ. ಆಕೆ ಸತ್ತಿದ್ದಾಳೆ ಎಂದು ಭಾವಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಅದೃಷ್ಟವಶಾತ್ ಆಕೆ ಬದುಕಿದ್ದು ರಾತ್ರಿ ಅಲ್ಲೇ ನರಳಾಡಿದ್ದಾಳೆ. ಬೆಳಿಗ್ಗೆ ದಾರಿಹೋಕನೊಬ್ಬ ಆಕೆಯನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ವೇಳೆ ಈ ಸತ್ಯ ಬಯಲಿಗೆ ಬಂದಿದೆ.