Mohali : ಭರ್ಜರಿ ಆಟದಲ್ಲಿ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ 56 ರನ್ ಗಳ ಜಯ ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡವು 5 ವಿಕೆಟ್ ನಷ್ಟಕ್ಕೆ 257 ರನ್ ಗಳಿಸಿತ್ತು. ಭಾರೀ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ 19.5 ಓವರ್‌ಗಳಲ್ಲಿ 201 ರನ್ ಗಳಿಗೆ ಸರ್ವ ಪತನವಾಯಿತು. ಪಂಜಾಬ್ ಆರಂಭದಲ್ಲಿಯೇ ತನ್ನ ಪ್ರಮುಖ ಎರಡು ವಿಕೆಟ್ ಕಳೆದುಕೊಂಡಿತ್ತು. ನಾಯಕ ಶಿಖರ್ ಧವನ್ 1 ರನ್ ಗಳಿಸಿ ಔಟಾದರೆ ಪ್ರಭಾಸಿಮ್ರಾನ್ ಸಿಂಗ್ 9 ರನ್ ಗಳಿಸಿ ಔಟಾದರು. ಆದರೆ ಅಥರ್ವ ತೈದೆ ಮತ್ತು ಸಿಕಂದರ್ ರಜಾ ಮೂರನೇ ವಿಕೆಟಿಗೆ 47 ಎಸೆತದಲ್ಲಿ 78 ರನ್ ಜೊತೆಯಾಟವಾಡಿದರು.
ಅಥರ್ವ ತೈದೆ 66 ರನ್, ಸಿಕಂದರ್ ರಾಜಾ 36 ರನ್ ಗಳಿಸಿದರು. ಸ್ಯಾಮ್ ಕರ್ರನ್ 21 ರನ್, ಜಿತೇಶ್ ಶರ್ಮಾ 24 ರನ್ ಗಳಿಸಿದರು. ಉಳಿದ ಆಟಗಾರರಿಂದ ನಿರೀಕ್ಷಿತ ಆಟ ತೋರದ ಹಿನ್ನೆಲೆಯಲ್ಲಿ ಪಂಜಾಬ್ 201 ರನ್‌ಗಳಿಗೆ ಆಲೌಟ್ ಆಯ್ತು. ಪಂಜಾಬ್ ಬ್ಯಾಟರ್‌ಗಳನ್ನು ನಿಯಂತ್ರಿಸಲು ಲಕ್ನೋ ಪರವಾಗಿ 8 ಮಂದಿ ಬೌಲ್ ಮಾಡಿದ್ದರು. ಲಕ್ನೋ ತಂಡ ಆರಂಭದಿಂದಲೇ ಬ್ಯಾಟ್ ಬೀಸಲು ಆರಂಭಿಸಿತ್ತು. ಕೆಎಲ್ ರಾಹುಲ್ 12 ರನ್ ಗಳಿಸಿ ಫೆವಲಿಯನ್ ಹಾದಿ ಹಿಡಿದರು. ಕೈಲ್ ಮೇಯರ್ಸ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಮೂರನೇ ವಿಕೆಟಿಗೆ 47 ಎಸೆತಗಳಲ್ಲಿ 89 ರನ್ ಜೊತೆಯಾಟವಾಡಿದರು.
ನಾಲ್ಕನೇ ವಿಕೆಟಿಗೆ ಸ್ಟೊಯಿನಿಸ್ ಮತ್ತು ನಿಕೂಲಸ್ ಪೂರನ್ 30 ಎಸೆತಗಳಲ್ಲಿ 76 ರನ್ ಗಳಿಸಿದರು. ಕೈಲ್ ಮೇಯರ್ಸ್ 54 ರನ್, ಆಯುಷ್ ಬದೋನಿ 43 ರನ್, ಸ್ಟೊಯಿನಿಸ್ 72 ರನ್, ನಿಕೂಲಸ್ ಪೂರನ್ 45 ರನ್ ಗಳಿಸಿ ಔಟ್ ಆದರು. ಲಕ್ನೋ ಬ್ಯಾಟರ್‌ಗಳನ್ನು ಕಟ್ಟಿ ಹಾಕಲು ಪಂಜಾಬ್ ತಂಡ 7 ಬೌಲರ್‌ಗಳನ್ನು ಬಳಸಿತ್ತು. ಅಷ್ಟೇ ಅಲ್ಲದೇ ಇತರ ರೂಪದಲ್ಲಿ 15 ರನ್ ನೀಡಿತ್ತು. ಪರಿಣಾಮ ಲಕ್ನೋ 5 ವಿಕೆಟ್ ಕಳೆದುಕೊಂಡು 257 ರನ್ ಗಳಿಸಿತ್ತು. ಲಕ್ನೋ ಪರ 14 ಸಿಕ್ಸ್, 27 ಬೌಂಡರಿ ದಾಖಲಾದರೆ ಪಂಜಾಬ್ ಪರ 8 ಸಿಕ್ಸ್ 16 ಬೌಂಡರಿ ಬಂದವು.
ಲಕ್ನೋ ಗಳಿಸಿದ 257 ರನ್ ಐಪಿಎಲ್ (IPL) ಇತಿಹಾಸದಲ್ಲಿ ತಂಡವೊಂದರ ಎರಡನೇ ಅತ್ಯಧಿಕ ಸ್ಕೋರ್ ಆಗಿದೆ. ಈ ಹಿಂದೆ 2013ರಲ್ಲಿ ಬೆಂಗಳೂರಿನಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿ 5 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿತ್ತು. ಇದು ತಂಡವೊಂದರ ಅತ್ಯಧಿಕ ರನ್ ಆಗಿದೆ.