NewDelhi : ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) 9 ರನ್‌ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ತಂಡವು 6 ವಿಕೆಟ್ ನಷ್ಟಕ್ಕೆ 197 ರನ್ ಗಳಿಸಿತ್ತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿ ಸೋಲು ಒಪ್ಪಿಕೊಂಡಿತು.
ಡೆಲ್ಲಿ ನಾಯಕ ಡೇವಿಡ್ ವಾರ್ನರ್ (David Warner) ಶೂನ್ಯಕ್ಕೆ ಔಟಾದರೂ 2ನೇ ವಿಕೆಟಿಗೆ ಫಿಲ್ ಸಾಲ್ಟ್ ಮತ್ತು ಮಿಚೆಲ್ ಮಾರ್ಷ್ 68 ಎಸೆತಗಳಿಗೆ 112 ರನ್ ಜೊತೆಯಾಟವಾಟವಾಡಿದರು. ಫಿಲ್ ಸಾಲ್ಟ್ ಔಟಾದ ಬೆನ್ನಲ್ಲೇ ಡೆಲ್ಲಿ ಕುಸಿತ ಆರಂಭವಾಯಿತು. ಮಧ್ಯಮ ಕ್ರಮಾಂಕದ ಅಕ್ಷರ್ ಪಟೇಲ್ ಹೊರತು ಪಡಿಸಿ ಉಳಿದ ಬ್ಯಾಟರ್‌ಗಳಿಂದ ಯಾವುದೇ ಪ್ರತಿರೋಧ ಬಾರದ ಕಾರಣ ಡೆಲ್ಲಿ ಈ ಪಂದ್ಯದಲ್ಲೂ ಸೋಲನ್ನು ಅನುಭವಿಸಿದೆ.
ಡೆಲ್ಲಿ ಪರ ಫಿಲ್ ಸಾಲ್ಟ್ 59 ರನ್(35 ಎಸೆತ, 9 ಬೌಂಡರಿ) ಮಿಚೆಲ್ ಮಾರ್ಷ್ 63 ರನ್(39 ಎಸೆತ, 1 ಬೌಂಡರಿ, 6 ಸಿಕ್ಸರ್) ಹೊಡೆದು ಔಟಾದರು. ಕೊನೆಯಲ್ಲಿ ಅಕ್ಷರ್ ಪಟೇಲ್ ಔಟಾಗದೇ 29 ರನ್ (14 ಎಸೆತ, 1 ಬೌಂಡರಿ, 2 ಸಿಕ್ಸರ್) ಬಾರಿಸಿದರು. ಈ ಗೆಲುವಿನ ಮೂಲಕ ಐಪಿಎಲ್ (IPL) ಅಂಕಪಟ್ಟಿಯಲ್ಲಿ ಹೈದರಾಬಾದ್ ತಂಡವು 6 ಅಂಕಗಳೊಂದಿಗೆ 8ನೇ ಸ್ಥಾನಕ್ಕೆ ಜಿಗಿದರೆ ಡೆಲ್ಲಿ 4 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿಯೇ ಮುಂದುವರೆದಿದೆ.
ಹೈದರಾಬಾದ್ ಪರ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ 67 ರನ್(36 ಎಸೆತ, 12 ಬೌಂಡರಿ, 1 ಸಿಕ್ಸರ್) ಹೊಡೆದರೆ ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಕ್ ಕ್ಲಾಸೆನ್ ಔಟಾಗದೇ 53 ರನ್(27 ಎಸೆತ, 2 ಬೌಂಡರಿ, 4 ಸಿಕ್ಸರ್), ಅಬ್ದುಲ್ ಸಮದ್ 28 ರನ್(21 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದ ಪರಿಣಮಾಮ ತಂಡದ ಮೊತ್ತ 190 ರನ್ ದಾಟುವಂತೆ ಮಾಡಿದರು.