ಇತ್ತೀಚೆಗೆ ಎಲ್ಲ ಚಿತ್ರರಂಗದಲ್ಲಿಯೂ ಹೊಡೆತ ಬೀಳುತ್ತಿವೆ. ತೆಲುಗು (Telugu) ಚಿತ್ರ ರಂಗದ ಖ್ಯಾತ ಕೋರಿಯೊಗ್ರಾಫರ್ (Choreographer) ಚೈತನ್ಯ (Chaitanya) ಅವರು ಸಾಲದ ಕಾಟ ತಾಳಲಾರದೆ ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ.

ಸಾಕಷ್ಟು ಸಾಲ ಮಾಡಿಕೊಂಡಿದ್ದ ಚೈತನ್ಯ, ತೀರಿಸಲಾಗದೆ ಹಲವು ದಿನಗಳಿಂದ ಮನನೊಂದಿದ್ದರು ಎನ್ನಲಾಗುತ್ತಿದೆ. ಈ ಕುರಿತು ವಿಡಿಯೋವೊಂದನ್ನು ಮಾಡಿರುವ ಅವರು, ನನ್ನ ಸಾವಿಗೆ ನಾನೇ ಕಾರಣ ಎಂದು ಹೇಳಿದ್ದಾರೆ. ಚೈತನ್ಯ ಆಂಧ್ರದ ನೆಲ್ಲೂರಿನಲ್ಲಿ ವಾಸವಿದ್ದರು. ಅವರು ಸಾಯುವುದಕ್ಕೂ ಮುನ್ನ ವಿಡಿಯೋವೊಂದನ್ನು ಮಾಡಿದ್ದಾರೆ. ‘ನನ್ನ ತಂದೆ, ತಾಯಿ ಹಾಗೂ ಸಹೋದರಿ ಚೆನ್ನಾಗಿ ನೋಡಿಕೊಂಡರು. ಆದರೆ, ನಾನು ಅನಿವಾರ್ಯ ಕಾರಣಗಳಿಂದಾಗಿ ಸಾಲ ಮಾಡಿಕೊಂಡೆ. ಅದನ್ನು ತೀರಿಸಲು ಕಷ್ಟವಾಯಿತು. ಹೀಗಾಗಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದೇನೆ. ನೆಲ್ಲೂರಿನಲ್ಲಿ ಇಂದು ನನ್ನ ಕೊನೆಯ ದಿನ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ತೆಲುಗಿನ ಜನಪ್ರಿಯ ಡ್ಯಾನ್ಸ್ ಶೋ ‘ಧೀ’ ಮೂಲಕ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಚೈತನ್ಯ, ಪ್ರಭುದೇವ ಸೇರಿದಂತೆ ಹಲವರೊಂದಿಗೆ ಕೆಲಸ ಮಾಡಿದ್ದಾರೆ. ಅಲ್ಲದೇ, ಅನೇಕ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ. ಚೈತನ್ಯ ಸಾವಿಗೆ ಹಲವರು ಕಂಬನಿ ಮಿಡಿದಿದ್ದಾರೆ.