Hyderabad : 8 ವರ್ಷದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕಾರಿನೊಳಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆಯೊಂದು ಆಂಧ್ರಪ್ರದೇಶ (Andhraprade sh) ದ ಕಾಕಿನಾಡ ಜಿಲ್ಲೆಯಲ್ಲಿ ನಡೆದಿದೆ.

ಬಾಲಕಿಯು ಕಾರಿ (Car) ನೊಳಗೆ ತನ್ನ ಪಾಡಿಗೆ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಕಾರಿನ ಡೋರ್ ಲಾಕ್ ಆಗಿ ಬಾಲಕಿ (Girl) ಒಳಗೆ ಸಿಲುಕಿಕೊಂಡಿದ್ದಾಳೆ. ಪರಿಣಾಮ ಉಸಿರಾಡಲು ಸಾಧ್ಯವಾಗದೆ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.

ಸಂಜೆಯಾದರೂ ಬಾಲಕಿ ಕಾಣದೆ ಇದ್ದಾಗ ಆಕೆಯ ಪೋಷಕರು ಹುಡುಕಾಟ ನಡೆಸಿದ್ದಾರೆ. ಎಲ್ಲ ಕಡೆ ಹುಡುಕಾಡಿದರೂ ಬಾಲಕಿ ಕಾಣಿಸಲಿಲ್ಲ. ಕೊನೆಗೆ ಮನೆ ಪಕ್ಕ ನಿಲ್ಲಿಸಿದ್ದ ಕಾರನ್ನು ಚೆಕ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಾಲಕಿ ಕಾರಿನೊಳಗೆ ಪತ್ತೆಯಾಗಿದ್ದಾಳೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ.
ಇತ್ತೀಚೆಗಷ್ಟೇ ಬಾಲಕಿಯ ತಂದೆ ಸಾವನ್ನಪ್ಪಿದ್ದರು. ಮೃತಪಟ್ಟ ಬಾಲಕಿ ತನ್ನ 11 ವರ್ಷದ ಸಹೋದರನ ಜೊತೆ ತಾಯಿಯೊಂದಿಗೆ ವಾಸವಾಗಿದ್ದಳು. ಪತಿ ತೀರಿಕೊಂಡ ದುಃಖದಲ್ಲಿದ್ದ ಆದಿಲಕ್ಷ್ಮಿಗೆ ಗ್ರಾಮಸ್ಥರು ಸಾಂತ್ವನ ಹೇಳುತ್ತಿದ್ದಂತೆಯೇ ಸದ್ಯ ಮತ್ತೊಂದು ದುರಂತ ಸಂಭವಿಸಿದೆ. ಸ್ಥಳದಲ್ಲಿ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.