ವ್ಯಕ್ತಿಯೊಬ್ಬ ಮಹಿಳೆಗೆ 2 ಲಕ್ಷ ರೂ. ನೀಡಿ, ಅವರಿಗೆ ಮರಳಿ ಕೊಡಲಾಗದ ಹಿನ್ನೆಲೆಯಲ್ಲಿ ಮಹಿಳೆಯ ಅಪ್ರಾಪ್ತ ಮಗಳನ್ನು ಮದುವೆಯಾಗಿರುವ ಇಡೀ ಸಮಾಜವೇ ತಲೆ ತಗ್ಗಿಸುವ ಘಟನೆಯೊಂದು ಬಿಹಾರದ (Bihar) ಸಿವಾನ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮಹಿಳೆಯೊಬ್ಬರು (Woman) ಸಾಲ (Loan) ತೀರಿಸದ ಕಾರಣ 40 ವರ್ಷದ ಪಾಪಿಯೊಬ್ಬ ಆ ಮಹಿಳೆಯ 11 ವರ್ಷದ ಬಾಲಕಿಯನ್ನು ವಿವಾಹವಾಗಿದ್ದಾನೆ (Marriage) ಎಂದು ತಿಳಿದು ಬಂದಿದೆ. ಮಹೇಂದ್ರ ಪಾಂಡೆ ಎಂಬ ಪಾಪಿಯೇ ಅಪ್ರಾಪ್ತ ಬಾಲಕಿಯನ್ನು (Minor Girl) ಈ ರೀತಿ ಮದುವೆಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಮೈರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಚೆನಿ ಛಾಪರ್ ಗ್ರಾಮದ ನಿವಾಸಿ 40 ವರ್ಷದ ಮಹೇಂದ್ರ ಪಾಂಡೆ ಎಂಬಾತ ಬಾಲಕಿಯ ತಾಯಿಗೆ 2 ಲಕ್ಷ ರೂ. ಸಾಲ ನೀಡಿದ್ದ ಎನ್ನಲಾಗಿದೆ. ಆದರೆ, ಬಾಲಕಿಯ ತಾಯಿಗೆ ಮರಳಿ ಹಣ ನೀಡಲು ಆಗಿಲ್ಲ. ಹೀಗಾಗಿ ಮಹೇಂದ್ರ ಪಾಂಡೆ ಆಕೆಯ 11 ವರ್ಷದ ಮಗಳ ಮದುವೆ ಮಾಡಿಕೊಂಡು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದಾನೆ ಎನ್ನಲಾಗಿದೆ.

ಈ ಕುರಿತು ಸಂತ್ರಸ್ತ ಬಾಲಕಿಯ ತಾಯಿ ಮಾತನಾಡಿದ್ದು, ಲಕ್ಷ್ಮೀಪುರ ಗ್ರಾಮದಲ್ಲಿ ನಮಗೆ ಸಂಬಂಧಿಕರಿದ್ದು ನನ್ನ ಮಗಳು ಅಲ್ಲಿಗೆ ಆಗಾಗ ಹೋಗುತ್ತಿದ್ದಳು. ಅದೇ ಗ್ರಾಮದ ಮಹೇಂದ್ರ ಪಾಂಡೆ ಎಂಬುವರು ನಿಮ್ಮ ಮಗಳನ್ನು ನನ್ನ ಮನೆಯಲ್ಲಿಯೇ ಇಟ್ಟುಕೊಂಡು ಶಿಕ್ಷಣ ಕೊಡಿಸುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಮಹೇಂದ್ರ ಆಕೆಯನ್ನು ಮದುವೆಯಾಗಿ, ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ಆರೋಪಿ ಮಹೇಂದ್ರ ಪಾಂಡೆ, ನಾನು ತಪ್ಪು ಮಾಡಿದ್ದೇನೆ, ಯಾವ ಶಿಕ್ಷೆಯಾದರೂ ಅನುಭವಿಸುತ್ತೇನೆ ಎಂದು ಒಮ್ಮೆ ಹೇಳಿದರೆ, ಮತ್ತೊಮ್ಮೆ ಮಗಳಂತೆ ಭಾವಿಸಿದ್ದೇನೆ ಎಂದು ಹೇಳಿದ್ದಾನೆ.

ತನ್ನ 11 ವರ್ಷದ ಮಗಳನ್ನು ಸಾಲ ತೀರಿಸದ ಕಾರಣಕ್ಕೆ ವಿವಾಹವಾಗಿದ್ದಾನೆ ಎಂದು ಮಹಿಳೆ ಆರೋಪಿಸಿರುವುದಕ್ಕೆ ಸಾಲಗಾರ ಆಕೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ. ಈ ವಿಷಯ ಹಬ್ಬುತ್ತಿದ್ದಂತೆ ಆಕ್ರೋಶ ವ್ಯಕ್ತವಾಗುತ್ತಿದೆ. ಮಹೇಂದ್ರ ಪಾಂಡೆಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎನ್ನಲಾಗಿದೆ. ಅಪ್ರಾಪ್ತ ಬಾಲಕಿ ಕೂಡ ತನ್ನ ಅಳಲು ತೋಡಿಕೊಂಡಿದ್ದಾಳೆ. ತಾಯಿ ಇಲ್ಲಿಗೆ ಬಂದು ನನ್ನನ್ನು ಪಾಂಡೆಯೊಂದಿಗೆ ಬಿಟ್ಟುಹೋದರು ಎಂದಿದ್ದಾಳೆ. ಮತ್ತೊಂದೆಡೆ, ಬಾಲಕಿ ತಾಯಿ ಪಾಂಡೆ ತನ್ನ ಮಗಳನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಾಳೆ.