Lucknow : ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಖನೌ ಸೂಪರ್ ಜಯಂಟ್ಸ್ ನಡುವೆ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಪಂದ್ಯದ ಸಂಭಾವನೆಯಲ್ಲಿ ಶೇ. 100ರಷ್ಟು ದಂಡ ವಿಧಿಸಲಾಗಿದೆ. ಅಲ್ಲದೇ, ಲಖನೌ ವೇಗಿ ನವೀನ್ ಉಲ್ ಹಕ್ ಅವರಿಗೂ ಪಂದ್ಯದ ಸಂಭಾವನೆಯಲ್ಲಿ ಶೇ. 50 ರಷ್ಟು ದಂಡವನ್ನು ವಿಧಿಸಲಾಗಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಬೆಂಗಳೂರು ತಂಡ 18 ರನ್‌ಗಳಿಂದ ಗೆಲುವು ಸಾಧಿಸಿತ್ತು. ಆದರೆ, ಐಪಿಎಲ್ ಕೋಡ್ ಆಫ್ ಕಂಡಕ್ಟ್ ಎರಡನೇ ಹಂತದ ಅಪರಾಧವೆಸಗಿದ ಕಾರಣ ಕೊಹ್ಲಿ ಹಾಗೂ ಗಂಭೀರ್‌ಗೆ ದುಬಾರಿ ದಂಡ ವಿಧಿಸಲಾಗಿದೆ. ಇದನ್ನು ಇವರಿಬ್ಬರೂ ಒಪ್ಪಿಕೊಂಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಐಪಿಎಲ್ ನಿಯಮ ಉಲ್ಲಂಘಿಸಿದ ಕಾರಣ ಲಖನೌ ಸೂಪರ್ ಜಯಂಟ್ಸ್ ಮೆಂಟರ್ ಗೌತಮ್ ಗಂಭೀರ್‌ಗೆ ಪಂದ್ಯದ ಶುಲ್ಕದಲ್ಲಿ ಶೇ. 100 ರಷ್ಟು ದಂಡವನ್ನು ವಿಧಿಸಲಾಗಿದೆ,” ಎಂದು ಐಪಿಎಲ್ ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಜಗಳ ಇದೇ ಮೊದಲೇನಲ್ಲ. 10 ವರ್ಷಗಳ ಹಿಂದೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಣ ಪಂದ್ಯದಲ್ಲಿಯೂ ಇವರಿಬ್ಬರ ನಡುವೆ ಜಗಳ ನಡೆದಿತ್ತು. ವಿರಾಟ್ ಕೊಹ್ಲಿ ತಮ್ಮ ನಾಯಕತ್ವವನ್ನು ಫಾಫ್ ಡು ಪ್ಲೆ’ಪ್ಲೆಸಿಸ್‌ಗೆ ನೀಡಿ ಹಿರಿಯ ಬ್ಯಾಟ್ಸ್‌ಮನ್ ಆಗಿ ಆಡುತ್ತಿದ್ದರೆ, ಗೌತಮ್ ಗಂಭೀರ್ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿ ಇದೀಗ ಎಲ್‌ಎಸ್‌ಜಿ ತಂಡಕ್ಕೆ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪಂದ್ಯ ಮುಗಿದ ನಂತರ ಎರಡೂ ತಂಡಗಳ ಆಟಗಾರರು ಕೈಕುಲುಕುವ ವೇಳೆ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಮಾತಿನ ಚಕಮಕಿ ನಡೆದಿತ್ತು. ನಂತರ ಕೈಲ್ ಮೇಯರ್ಸ್ ಹಾಗೂ ವಿರಾಟ್ ಕೊಹ್ಲಿ ನಡುವೆ ಕೂಡ ಮಾತಿಗೆ ಮಾತು ಬೆಳೆದಿತ್ತು. ಈ ಸಂದರ್ಭದಲ್ಲಿ ಗೌತಮ್ ಗಂಭೀರ್ ಮಧ್ಯೆ ಪ್ರವೇಶಿಸಿ, ತಮ್ಮ ತಂಡದ ಆಟಗಾರರನ್ನು ತಡೆದಿದ್ದರು.
ಆದರೆ, ಗಾಯಾಳು ಕೆ.ಎಲ್ ರಾಹುಲ್, ಅಮಿತ್ ಮಿಶ್ರಾ ಸೇರಿದಂತೆ ಲಖನೌ ತಂಡದ ಆಟಗಾರರ ಮೇಲೆ ವಿರಾಟ್ ಕೊಹ್ಲಿ ವರ್ತನೆಗೆ ಕಿಡಿ ಕಾರಿದ ಗೌತಮ್ ಗಂಭೀರ್, ಆರ್‌ಸಿಬಿ ಆಟಗಾರನ ಮೇಲೆ ಜಗಳಕ್ಕೆ ನಿಂತರು. ಅಮಿತ್ ಮಿಶ್ರಾ ಮಧ್ಯೆ ಪ್ರವೇಶಿಸಿದ ಬಳಿಕ ಇವರಿಬ್ಬರ ಜಗಳ ತಣ್ಣಗಾಯಿತು. 17ನೇ ಓವರ್‌ನಲ್ಲಿ ಬೌಂಡರಿ ಸಿಡಿಸಿದ ಬಳಿಕ ವಿರಾಟ್ ಕೊಹ್ಲಿಯನ್ನು ಗುರಾಯಿಸಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಅಮಿತ್ ಮಿಶ್ರಾ ಹಾಗೂ ಫೀಲ್ಡ್ ಅಂಪೈರ್ ಮಧ್ಯೆ ಪ್ರವೇಶಿಸಿದ ಬಳಿಕ ಪರಿಸ್ಥಿತಿ ತಣ್ಣಗಾಗಿತ್ತು.