Ramanagar : ರಾಮನಗರದ ಜನರು ಕಳೆದ 4 ತಲೆ ಮಾರಿನಿಂದಲೂ ಒಂದೇ ಕುಟುಂಬಕ್ಕೆ ಅವಕಾಶ ನೀಡಿದ್ದಾರೆ. ತಂದೆ ಆಯಿತು. ಮಗ ಆಯಿತು. ಸದ್ಯ ಅವರ ಮಗ ಈಗ ಕಣಕ್ಕೆ ಇಳಿದಿದ್ದಾರೆ ಎಂದು ದೇವೇಗೌಡರ (H.D.Deve Gowda) ಕುಟುಂಬ ರಾಜಕಾರಣದ ಬಗ್ಗೆ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ (BJP) ಬೂತ್ ಮಟ್ಟದ ಕಾರ್ತಕರ್ತರ ಸಭೆಯಲ್ಲಿ ಮಾತನಾಡಿದ ಸುಮಲತಾ ಅವರು, ಅಂಬರೀಶ್ ಅವರ ರಾಜಕೀಯ ಜೀವನ ಪ್ರಾರಂಭವಾಗಿದ್ದೇ ರಾಮನಗರದಿಂದ (Ramanagara). ಈ ರಾಮನಗರಕ್ಕೂ ನಮ್ಮ ಕುಟುಂಬಕ್ಕೂ ಸಂಬಂಧವಿದೆ. ಬಿಜೆಪಿಯಲ್ಲಿ ಮಹಿಳೆಗೆ ಗೌರವ ಕೊಡುತ್ತಾರೆ. ಮಂಡ್ಯದಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿದವರೇ ಇಲ್ಲಿ ಸ್ಪರ್ಧೆ ಮಾಡಿದ್ದಾರೆ. ನಾನು ಒಂದು ಕುಟುಂಬದ ವಿರುದ್ಧ ಸ್ಪರ್ಧೆ ಮಾಡಿದ್ದೇ ಅವರ ದೃಷ್ಟಿಯಲ್ಲಿ ದೊಡ್ಡ ತಪ್ಪಾಯಿತು. ಹೆಣ್ಣು ಎಂಬ ಗೌರವ ಇಲ್ಲದೆ, ಮಾತುಗಳನ್ನಾಡಿದರು ಎಂದು ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣೆಗೆ ಒಟ್ಟು 150 ಕೋಟಿ ಹಣ ಖರ್ಚು ಮಾಡಿದರು. ಆದರೆ ಮಂಡ್ಯದ ಜನ ನನ್ನ ಪರ ನಿಂತು ಗೆಲ್ಲಿಸಿದರು. ಭದ್ರಕೋಟೆ, ಜಾತಿ ಏನೆಲ್ಲಾ ತಂದರೂ ಮಂಡ್ಯದ ಜನ ಸ್ವಾಭಿಮಾನ ಮೆರೆದರು. ಅವರು ಆಡಳಿತ ಯಂತ್ರ ದುರ್ಬಳಕೆ ಮಾಡಿಕೊಂಡರು. ನಮ್ಮೂರಿಗೆ ನಮ್ಮೂರವರೇ ಸಾಕು. 4 ತಲೆಮಾರಿನಿಂದ ಒಂದೇ ಕುಟುಂಬಕ್ಕೆ ಅವಕಾಶ ಕೊಟ್ಟಿದ್ದೀರಾ. ಇನ್ನು ಅದರಿಂದ ಹೊರಗೆ ಬನ್ನಿ ಎಂದು ಕಿವಿ ಮಾತು ಹೇಳಿದ್ದಾರೆ.
ಇವರಿಗೆ ರಾಮನಗರ, ಮಂಡ್ಯ, ಹಾಸನದಲ್ಲಿ ಒಬ್ಬರೇ ಒಬ್ಬ ಸಮರ್ಥ ಕಾರ್ಯಕರ್ತರನ್ನು ಬೆಳೆಸಲು ಸಾಧ್ಯವಾಗಿಲ್ಲ. ಅಭಿಮಾನ ಹೇಗೆ ಇರಲಿ. ಒಂದು ಕುಟುಂಬ ಮಾತ್ರ ಅಭಿವೃದ್ಧಿಯಾಗುತ್ತಿದೆ ಎಂದರೆ ಮನೆ ಮಕ್ಕಳು ಏನಾಗಬೇಕು? ಹಾಸನ ಅಭಿವೃದ್ಧಿ ಮಾಡೋದಕ್ಕೆ ನೀವು ವೋಟ್ ಹಾಕ್ಬೇಕಾ? ಹಾಸನದ ಅಭಿವೃದ್ಧಿಗೆ ಹಾಸನದವರು ವೋಟ್ ಹಾಕಿಕೊಳ್ಳಲಿ. ಮಂಡ್ಯ, ರಾಮನಗರದಲ್ಲಿ ಸ್ಥಳೀಯರನ್ನು ಆಯ್ಕೆ ಮಾಡಿ. ಇನ್ನು ಮುಂದಾದರು ಸ್ಥಳೀಯರಿಗೆ ಅವಕಾಶ ಮಾಡಿಕೊಟ್ಟು, ಅಭಿವೃದ್ಧಿಯಾಗುವಂತೆ ನೋಡಿಕೊಳ್ಳಿ ಎಂದು ಹೇಳಿದರು.