Bangalore : ಕಾಂಗ್ರೆಸ್ ಪಕ್ಷವು ತನ್ನ ಚಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳ (Bajrang Dal) ಬ್ಯಾನ್ ಮಾಡಿರುವ ವಿಷಯ ಪ್ರಸ್ತಾಪಿಸಿದ್ದಕ್ಕೆ ಬಿಜೆಪಿ (BJP) ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ನಿಲುವನ್ನು ಬಿಜೆಪಿ ನಾಯಕರು ಖಂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಪಿಕ್ಚರ್ ಬದಲಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಡಾ. ಅಶ್ವಥ್ಥನಾರಾಯಣ ಸೇರಿದಂತೆ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಪಿಕ್ಚರ್ ಬದಲಾವಣೆ ಮಾಡಿ ‘ನಾನೊಬ್ಬ ಬಜರಂಗಿ’ ಎಂಬ ಚಿತ್ರ ಅಳವಡಿಸಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಕೂಡ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ. ಬಜರಂಗದಳ ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.ಸಾಮಾಜಿಕವಾಗಿ, ಧಾರ್ಮಿಕವಾಗಿ ಕೆಲಸ ಮಾಡುವಂತಹ ಸಂಘಟನೆಯೇ ಭಜರಂಗದಳ. ಆದರೆ, ಪಿಎಫ್ಐ ದೇಶವಿರೋಧಿ ಕೃತ್ಯಗಳನ್ನು ಎಸಗಿದೆ. ಭಯೋತ್ಪಾದನಾ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ. ಸಾಕಷ್ಟು ಕೇಸ್ಗಳು ಅದರ ಮೇಲಿವೆ, ಪುರಾವೆಗಳೂ ಇವೆ. ಅದಕ್ಕೆ ಭಜರಂಗದಳವನ್ನು ಹೊಲಿಸುವುದು ಸರಿಯಲ್ಲ. ಪಿಎಫ್ಐಯನ್ನು ನಾವು ನಿಷೇಧಿಸಿದ್ದೇವೆ ಎಂದು ಹೇಳಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿಜೆಪಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಬಜರಂಗದಳ ನಿಷೇಧಿಸುವುದಾಗಿ ಕಾಂಗ್ರೆಸ್ ಪಕ್ಷ ಘೋಷಿಸಿದೆ. ಕಾಂಗ್ರೆಸ್ನ ಈ ಪ್ರಣಾಳಿಕೆಯಲ್ಲಿ ಹೊಸ ತಂತ್ರ ಅಡಗಿದೆ. ಕಾಂಗ್ರೆಸ್ನವರಿಗೆ ಹನುಮಂತನ ಕಂಡರೂ ಆಗಿಬರುವುದಿಲ್ಲ ಅಂದಹಾಗೆ ಆಯಿತು ಎಂದು ಲೇವಡಿ ಮಾಡಿದ್ದಾರೆ.