Ahmedabad : ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ 5 ರನ್ ಗಳ ರೋಚಕ ಜಯ ದಾಖಲಿಸಿದೆ.
ಈ ಸೋಲಿನ ಮೂಲಕ ಟೈಟಾನ್ಸ್ ತಂಡವು 9 ಪಂದ್ಯಗಳ ಪೈಕಿ 6ರಲ್ಲಿ ಜಯ ಸಾಧಿಸಿ ಪ್ಲೇ ಆಫ್ ನ ಹೊಸ್ತಿಲಲ್ಲಿ ಇದೆ. 9ರಲ್ಲಿ ಕೇವಲ 3 ಪಂದ್ಯಗಳನ್ನು ಜಯಿಸಿರುವ ಡೆಲ್ಲಿ ಮಾತ್ರ ತಾನು ಇನ್ನು ಮುಂದೆ ಆಡುವ ಎಲ್ಲ ಪದ್ಯಗಳನ್ನು ಗೆಲ್ಲುವ ಅನಿವಾರ್ಯತೆ ಇದೆ. ಒಂದೇ ಒಂದು ಪಂದ್ಯ ಸೋತರೂ ಬಹುತೇಕ ಪ್ಲೇ ಆಫ್‌ನಿಂದ ಹೊರಬೀಳುವುದು ಖಚಿತವಾಗುತ್ತಿತ್ತು. ಆದರೆ ಗೆಲುವಿನ ಮೂಲಕ ಪ್ಲೇ ಆಫ್ ಕನಸನ್ನ ಜೀವಂತವಾಗಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 130 ರನ್ ಗಳನ್ನು ಮಾತ್ರ ಗಳಿಸಿತು. ಕಡಿಮೆ ಮೊತ್ತದ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ನಿಗದಿತ ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿ ಸೋಲು ಅನುಭವಿಸಿತು. ಕೊನೆಯ ಎರಡು ಓವರ್ ಗಳಲ್ಲಿ ಗುಜರಾತ್ ಟೈಟಾನ್ಸ್ ಗೆಲುವಿಗೆ 33 ರನ್ ಗಳ ಬೇಕಾಗಿದ್ದವು. ಈ ಸಂದರ್ಭದಲ್ಲಿ ಮೊದಲ ಮೂರು ಎಸೆತಗಳಲ್ಲಿ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಕೇವಲ 3 ರನ್ ಗಳಿಸಿದರು. ಹೀಗಾಗಿ 9 ಎಸೆತಗಳಲ್ಲಿ 30 ರನ್ ಗಳು ಬೇಕಾಗಿದ್ದವು. ಆ ನಂತರ ಕ್ರಿಸ್ ನಲ್ಲಿ ಇದ್ದ ರಾಹುಲ್ ತೆವಾಟಿಯಾ ಹ್ಯಾಟ್ರಿಕ್ ಸಿಕ್ಸ್ ಚಚ್ಚಿದರು. ಹೀಗಾಗಿ ಮತ್ತೆ ಪಂದ್ಯವು ಟೈಟಾನ್ಸ್ ಕಡೆಗೆ ವಾಲಿತು.
ನಂತರ ಕೊನೆಯ 6 ಎಸೆತಗಳಲ್ಲಿ ಗೆಲ್ಲಲು 12 ರನ್ ಗಳು ಬೇಕಾದವು. ಪಾಂಡ್ಯ ಮತ್ತೆ ಮೊದಲ ಎರಡು ಎಸೆತಗಳಲ್ಲಿ ಕೇವಲ 3ರನ್ ಗಳಿಸಿದರು. ನಂತರ ಕ್ರಿಸ್ ಗೆ ಬಂದಿದ್ದ ತೆವಾಟಿಯಾ 4ನೇ ಎಸೆತ ಎದುರಿಸುವಲ್ಲಿ ವಿಫಲರಾಗಿ, ಮರು ಎಸೆತದಲ್ಲಿಯೇ ಕ್ಯಾಚ್ ನೀಡಿ ಔಟ್ ಆದರು. ಆಗ ಕ್ರಿಸ್ ಗೆ ಬಂದ ರಶೀದ್ ಕಾನ್ 5ನೇ ಎಸೆತದಲ್ಲಿ 2 ರನ್ ಗಳಿಸಿದರು. ಹೀಗಾಗಿ ಗೆಲ್ಲಲು ಕೊನೆಯ ಎಸೆತಕ್ಕೆ 7 ರನ್ ಗಳ ಅವಶ್ಯಕತೆ ಇತ್ತು. ಫುಲ್‌ಟಾಸ್ ಬಂದರೂ ರಶೀದ್ ಸಿಕ್ಸ್‌ಗೆ ಅಟ್ಟುವಲ್ಲಿ ವಿಫಲರಾದರು. ಈ ಹಿನ್ನೆಲೆಯಲ್ಲಿ ಟೈಟಾನ್ಸ್ ಸೋಲನ್ನು ಎದುರಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಬೌಲರ್‌ಗಳ ದಾಳಿಗೆ ತತ್ತರಿಸಿ ಹೋಗಿತ್ತು. ಮೊದಲ 10 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 54 ರನ್ ಗಳನ್ನು ಮಾತ್ರ ಗಳಿಸಿತ್ತು. ಕೊನೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಸಹಾಯದಿಂದ 130 ರನ್‌ಗಳ ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು.
ಡೆಲ್ಲಿ ಕ್ಯಾಪಿಟಲ್ಸ್ ಪರ ಅಮನ್ ಹಕೀಮ್ ಖಾನ್ 44 ಎಸೆತಗಳಲ್ಲಿ 51 ರನ್, ಅಕ್ಷರ್ ಪಟೇಲ್ 30 ಎಸೆತಗಳಲ್ಲಿ 27 ರನ್ ಗಳಿಸಿದರು. ರಿಪಾಲ್ ಪಟೇಲ್ 23 ರನ್ ಗಳಿಸಿದರು. ಗುಜರಾತ್ ಟೈಟಾನ್ಸ್ ಪರ ಏಕಾಂಗಿ ಹೋರಾಟ ನಡೆಸಿದ ನಾಯಕ ಹಾರ್ದಿಕ್ ಪಾಂಡ್ಯ 59 ರನ್ ಗಳಿಸಿದರೆ, ಅಭಿನವ್ ಮನೋಹರ್ 26 ರನ್, ರಾಹುಲ್ ತೆವಾಟಿಯಾ 20 ರನ್ ಗಳಿಸಿದರು. ಟೈಟಾನ್ಸ್ ಪರ ಮೊಹಮ್ಮದ್ ಶಮಿ 4 ವಿಕೆಟ್. ಮೋಹಿತ್ ಶರ್ಮಾ 2 ವಿಕೆಟ್ ಹಾಗೂ ರಶೀದ್ ಖಾನ್ 1 ವಿಕೆಟ್ ಕಿತ್ತರು. ಡೆಲ್ಲಿ ಕ್ಯಾಪಿಟಲ್ಸ್ ಪರ ಖಲೀಲ್ ಅಹ್ಮದ್ ಹಾಗೂ ಇಶಾಂತ್ ಶರ್ಮಾ ತಲಾ 2 ವಿಕೆಟ್ ಪಡೆದರೆ, ಅನ್ರಿಚ್ ನಾರ್ಟ್ಜೆ ಹಾಗೂ ಕುಲ್‌ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.