ಲಕ್ನೋ : ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿ ಜಯದ ವಿಶ್ವಾಸದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)ಗೆ ದೊಡ್ಡ ನಿರಾಸೆ ಉಂಟಾಗಿದೆ. ಮಳೆಯಿಂದಾಗಿ (Rain) ಪಂದ್ಯ ರದ್ದಾದ ಕಾರಣ ಇತ್ತಂಡಗಳು ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿ ಉಳಿದುಕೊಂಡಿವೆ.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮ್ಯಾನ್ಗಳು ಮತ್ತೊಮ್ಮೆ ಕಳಪೆ ಪ್ರದರ್ಶನ ಮುಂದುವರೆಸಿದರು. ಹೀಗಾಗಿ ಚೈನ್ನೈ ಎದುರು ಅಲ್ಪ ಮೊತ್ತಕ್ಕೆ ತಂಡ ಕುಸಿಯಿತು. ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕನಿಷ್ಠ ಮೊತ್ತಕ್ಕೆ ಕಟ್ಟಿಹಾಕುವ ನಿರೀಕ್ಷೆಯಲ್ಲಿತ್ತು. ಆದರೆ ಯುವ ಆಟಗಾರ ಆಯುಷ್ ಬದೋನಿ (Ayush Badoni) ಚೆನ್ನೈ ಸೂಪರ್ ಕಿಂಗ್ಸ್ ತಂಡದ ಲೆಕ್ಕಾಚಾರವನ್ನ ತಲೆಕೆಳಗಾಗಿಸಿದರು. ಕೊನೆಯ ಹಂತದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬದೋನಿ ಸ್ಫೋಟಕ ಬ್ಯಾಟಿಂಗ್ ತೋರಿಸಿ, ಗೌರವಯುತ ಮೊತ್ತ ಗಳಿಸಲು ಕಾರಣವಾದರು. 19.2 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಲಕ್ನೋ 125 ರನ್ ಗಳಿಸಿತ್ತು. ಇನ್ನೂ 4 ಎಸೆತಗಳು ಬಾಕಿಯಿದ್ದಾಗಲೇ ಮಳೆ ಆರಂಭವಾಯಿತು. ಹೆಚ್ಚಿನ ಮಳೆಯಾಗಿರುವ ಹಿನ್ನೆಲೆಯಲ್ಲಿ ಪಾಯಿಂಟ್ ಗಳನ್ನು ಹಂಚಲಾಯಿತು.
ಲಕ್ನೋ ಪರ ಆಯುಷ್ ಬದೋನಿ 33 ಎಸೆತಗಳಲ್ಲಿ ಸ್ಫೋಟಕ 59 ರನ್, ನಿಧಾನಗತಿಯ ಆಟ ಆಡಿದ ನಿಕೋಲಸ್ ಪೂರನ್ (Nicholas Pooran) 20 ರನ್ ಗಳಿಸಿದತು. ಚೆನ್ನೈ ಸೂಪರ್ ಕಿಂಗ್ಸ್ ಪರ ಮೊಯಿನ್ ಅಲಿ, ಮಹೀಶ್ ತೀಕ್ಷಣ ಹಾಗೂ ಮಹೇಶ್ ಪತಿರಣ ತಲಾ ಎರಡು ವಿಕೆಟ್ ಕಿತ್ತರೆ, ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.