Kalaburagi : ಬಿಜೆಪಿ ಪ್ರತಿ ಬಾರಿಯೂ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಮತ ಕೇಳುತ್ತಿದೆ ಎಂದು ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ರಾತ್ರಿ ಮಟನ್ ತಿಂದು, ಹಗಲಿ ಮಾಂಸಾಹಾರಿಗಳನ್ನು ಬೈಯ್ತಾರೆ. ಸಮಾಜದಲ್ಲಿ ಜಗಳ ಹಚ್ಚುವುದೇ ಇವರ ಗುರಿ. ಕಳೆದ ಬಾರಿಯೂ ನಮ್ಮ ಪ್ರಣಾಳಿಕೆ ಈಡೇರುವದಿಲ್ಲ ಎಂದು ಹೇಳಿದ್ದರು. ಆದರೆ, ಎಷ್ಟು ಭರವಸೆಗಳನ್ನು ನಾವು ಈಡೇರಿಸಿದ್ದೇವು ಎಂಬುವುದು ಜನರಿಗೆ ಗೊತ್ತಿದೆ. ಅನುದಾನ, ಆದಾಯಗಳನ್ನು ನೋಡಿಕೊಂಡೇ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿಗೆ ಅಳುವುದೇ ಕೆಲಸವಾಗಿ ಬಿಟ್ಟಿದೆ. ನಾನು ಕೆಳ ವರ್ಗದವನು ನನ್ನನ್ನು ತುಳಿಯುತ್ತಿದ್ದಾರೆ ಅಂತಾರೆ. ಆದರೆ, ಜಾತಿ ವ್ಯವಸ್ಥೆಯಲ್ಲಿ ನಾನು ಕೂಡ ಮೋದಿಗಿಂತ ಕೆಳಗೆ ಇದ್ದೇನೆ. ಇದು ಕೇವಲ ಚುನಾವಣಾ ಗಿಮಿಕ್ ಅಷ್ಟೇ. ಕಲ್ಯಾಣ ಕರ್ನಾಟಕಕ್ಕೆ ಪ್ರಧಾನಿಯಿಂದ ಯಾವ ಕೊಡುಗೆಯೂ ಇಲ್ಲ. ರೈಲುಗಳಿಗೆ ಬಣ್ಣ ಬಳಿದು ಹೊಸ ರೈಲು ಬಿಟ್ಟರು. ಕೆಲವರಿಗೆ ಪ್ರಚಾರ ಬೇಕು. ಪ್ರಚಾರದಿಂದಲೇ ಎಲ್ಲಾ ಸಿಗುತ್ತೆ ಅಂತ ಅಂದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.