Shivamogga : ನಮ್ಮ ಕುಟುಂಬಕ್ಕೆ ಹೊಂದಾಣಿಕೆ ಮಾಡಿಕೊಳ್ಳುವ ಸ್ಥಿತಿ ಬಂದಿಲ್ಲ ಎಂದು ಬಿ.ವೈ. ವಿಜಯೇಂದ್ರ (BY Vijayendra) ಹೇಳಿದ್ದಾರೆ.
ಶಿವಮೊಗ್ಗ (Shivamogga) ಪ್ರೆಸ್ ಕ್ಲಬ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, 2004ರ ಚುನಾವಣೆಯಲ್ಲಿ ಅಭ್ಯರ್ಥಿ ಯಾರು ಎಂಬುವುದು ಗೊತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಶಿಕಾರಿಪುರದ (Shikaripura) ಮತದಾರರು ಸುಮಾರು 46 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಯಡಿಯೂರಪ್ಪ ಅವರನ್ನು ಗೆಲ್ಲಿಸಿದರು. ನಾನು ಈ ಬಾರಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಉಪಚುನಾವಣೆ ನಡೆದ ಸಂದರ್ಭದಲ್ಲಿ ಬಿವೈ ರಾಘವೇಂದ್ರ ಅವರು ಸ್ಪರ್ಧೆ ಮಾಡಿದಾಗ ಸಿದ್ದರಾಮಯ್ಯ ಸರ್ಕಾರದ ಇಡೀ ಕ್ಯಾಬಿನೆಟ್ ಶಿಕಾರಿಪುರಕ್ಕೆ ಬಂದು ತಾಲೂಕಿನಾದ್ಯಂತ ಪ್ರಚಾರ ಮಾಡಿತ್ತು. ಶಿಕಾರಿಪುರದಲ್ಲಿ ಹಣ, ಹೆಂಡದ ಹೊಳೆ ಹರಿಸಿದ್ದರೂ ಅದ್ಯಾವುದಕ್ಕೂ ಬೆಲೆ ಕೊಡದೆ ಕ್ಷೇತ್ರದ ಮತದಾರರು ರಾಘವೇಂದ್ರ ಅವರಿಗೆ ಆಶೀರ್ವಾದ ಮಾಡಿದ್ದರು. ಹೀಗಾಗಿ ಹೊಂದಾಣಿಕೆ ರಾಜಕೀಯದ ಪ್ರಶ್ನೆಯೇ ಉದ್ಭವಿಸಲ್ಲ. ಪಕ್ಷದ ಸಂಘಟನೆ, ಕಾರ್ಯಕರ್ತರ ಪರಿಶ್ರಮ, ಅಭಿವೃದ್ಧಿ ಕೆಲಸವೇ ನಮಗೆ ಶ್ರೀರಕ್ಷೆಯಾಗಿದೆ ಎಂದು ಹೇಳಿದ್ದಾರೆ.
ಬಂಜಾರರ ಮೀಸಲಾತಿ ವಿಷಯವನ್ನು ಇಟ್ಟುಕೊಂಡು ಕೆಲವರು ಅವರಲ್ಲೇ ಒಡಕು ಸೃಷ್ಟಿಸಲು ಯತ್ನಿಸಿದರು. ಯಡಿಯೂರಪ್ಪ ಅವರಿಗೆ ತೊಂದರೆ ಕೊಡಬೇಕೆಂಬ ಉದ್ದೇಶದಿಂದ ಅವರ ಮನೆಗೆ ಕಲ್ಲು ಹೊಡೆಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.