ಸದ್ಯ ದೇಶದಲ್ಲಿ ಐಪಿಎಲ್ ಹವಾ ಜೋರಾಗಿದೆ. ಈಗಾಗಲೇ ಅರ್ಧಕ್ಕೂ ಹೆಚ್ಚು ಪಂದ್ಯಗಳು ಮುಗಿದಿವೆ. ಹಲವು ಆಟಗಾರರು ಸಖತ್ ಆಗಿ ಮಿಂಚುತ್ತಿದ್ದು ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ. ಭಾರತೀಯ ತಂಡದ ನಾಯಕ ರೋಹಿತ್ ಶರ್ಮಾ, ಕೊಹ್ಲಿ ಓಪನರ್ ಆಗಿ ಆಡುತ್ತಿದ್ದರೆ, ಮಾಜಿ ನಾಯಕ ಧೋನಿ 5 ಅಥವಾ 6ನೇ ಸ್ಥಾನದಲ್ಲಿ ಆಡುತ್ತಿದ್ದಾರೆ. ಆದರೂ ಸ್ಟ್ರೈಕ್ ರೇಟ್ ಯಾರದ್ದು ಎಂಬ ಚರ್ಚೆ ಈಗ ಶುರುವಾಗಿದೆ.

ಐಪಿಎಲ್ ನಲ್ಲಿ ಅತಿ ಹೆಚ್ಚು ಸ್ಟ್ರೈಕ್ ರೇಟ್ನೊಂದಿಗೆ ಬ್ಯಾಟ್ ಬೀಸಿದವರನ್ನು ನೋಡುವುದಾದರೆ, ಯುವಕರನ್ನು ನಾಚಿಸುವಂತಹ ಪ್ರದರ್ಶನ ನೀಡಿರುವ 41 ವರ್ಷದ ಧೋನಿ ಈ ಬಾರಿ ಐಪಿಎಲ್ನಲ್ಲಿ ಆಡಿರುವ ಕೆಲವೇ ಕೆಲವು ಪಂದ್ಯಗಳಲ್ಲಿ ತನ್ನ ಸಾಮಥ್ಯ್ರವನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಇದುವರೆಗೆ ಧೋನಿ ಈ ಐಪಿಎಲ್ನಲ್ಲಿ ಒಟ್ಟು 10 ಪಂದ್ಯಗಳನ್ನಾಡಿದ್ದು, ಕೇವಲ 6 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಇದರಲ್ಲಿ 211.42ರ ಸ್ಟ್ರೇಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ಧೋನಿ 74 ರನ್ ಕಲೆ ಹಾಕಿದ್ದಾರೆ. ಇದರಲ್ಲಿ ಕೇವಲ 2 ಬೌಂಡರಿಗಳು ಮತ್ತು 8 ಸಿಕ್ಸರ್ ಸೇರಿವೆ. ಬರೀ ಬೌಂಡರಿಯಿಂದಲೇ ಧೋನಿ 56 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಕೇವಲ ಇಬ್ಬರು ಮಾತ್ರ 200+ ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಅವರಲ್ಲಿ ಒಬ್ಬರು ಮಹೇಂದ್ರ ಸಿಂಗ್ ಧೋನಿ ಅದರೆ ಮತ್ತೊಬ್ಬರು ರಾಹುಲ್ ತೆವಾಟಿಯಾ. 6 ಇನ್ನಿಂಗ್ಸ್‌ಗಳಲ್ಲಿ 63ಕಲೆ ಹಾಕಿರುವ ತೆವಾಟಿಯಾ 203.22 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ.

ರಾಜಸ್ಥಾನ್ ಪರ ಆಡುತ್ತಿರುವ ಧ್ರುವ್ ಜುರೇಲ್ 191.30 ಸ್ಟ್ರೈಕ್ ರೇಟ್‌ನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಜಿಂಕ್ ರಹಾನೆ ನಾಲ್ಕನೇ ಸ್ಥಾನದಲ್ಲಿದ್ದು, ಆಡಿರುವ 6 ಇನ್ನಿಂಗ್ಸ್‌ಗಳಲ್ಲಿ 190 ಸ್ಟ್ರೈಕ್‌ರೇಟ್‌ನೊಂದಿಗೆ 224 ರನ್ ಕಲೆಹಾಕಿದ್ದಾರೆ. ಫಾಫ್ ಡು ಪ್ಲೆಸಿಸ್ 159.58 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ವಿರಾಟ್ ಕೊಹ್ಲಿಯ ಸ್ಟ್ರೈಕ್ ರೇಟ್ ಕೇವಲ 137.87 ಆಗಿದೆ. ಹೀಗಾಗಿ ಇವರು ಸ್ಟ್ರೈಕ್ ರೇಟ್ ನಲ್ಲಿ 52ನೇ ಸ್ಥಾನದಲ್ಲಿದ್ದಾರೆ. ಮುಂಬೈ ನಾಯಕ ರೋಹಿತ್ ಶರ್ಮಾ ಕೂಡ ಕೊಹ್ಲಿಗಿಂತ ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ್ದು, ಕೇವಲ 130 ಕ್ಕಿಂತ ಕಡಿಮೆ ಸ್ಟ್ರೈಕ್ ರೇಟ್ನಲ್ಲಿ ರನ್ ಬಾರಿಸಿದ್ದಾರೆ.