Mohali : ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಇಶಾನ್ ಕಿಶನ್ (Ishan Kishan) ಹಾಗೂ ಸೂರ್ಯಕುಮಾರ್ ಯಾದವ್ (Suryakumar Yadav) ಭರ್ಜರಿ ಅರ್ಧ ಶತಕಗಳ ನೆರವಿನಿಂದ ಮುಂಬಯಿ ಇಂಡಿಯನ್ಸ್ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಗೆಲ್ಲಲು 215 ರನ್ ಗಳ ಗುರಿ ಪಡೆದ ಮುಂಬಯಿ ಇಂಡಿಯನ್ಸ್ ತಂಡದ ಬ್ಯಾಟ್ಸಮನ್ ಗಳು ಆಕ್ರಮಣ ಕಾರಿ ಬ್ಯಾಟಿಂಗ್ ನಡೆಸಿ, 18.5 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು. ಈ ನಿಟ್ಟಿನಲ್ಲಿ ಕಳೆದ ಪಂದ್ಯದಲ್ಲಿ ಉಂಡಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಈ ಮೂಲಕ ಮುಂಬಯಿ ಪಾಯಿಂಟ್ಸ್ ಪಟ್ಟಿಯಲ್ಲಿ ಚೇತರಿಕೆ ಕಂಡಿದೆ.
ಬೃಹತ್ ಮೊತ್ತ ಬೆನ್ನಟ್ಟಿದ ಮುಂಬಯಿಗೆ ಕೂಡ ಆರಂಭ ಉತ್ತಮವಾಗಿರಲಿಲ್ಲ. ರೋಹಿತ್ ಈ ಪಂದ್ಯದಲ್ಲಿಯೂ ತಮ್ಮ ಹೋರಾಟವನ್ನು ಶೂನ್ಯಕ್ಕೆ ಇಳಿಸಿದರು. 2ನೇ ವಿಕೆಟ್ ಜೊತೆಯಾಟಕ್ಕೆ 6 ಓವರ್ಗಳಲ್ಲಿ 54 ರನ್ ಕಲೆಹಾಕಿತ್ತು. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ (Suryakumar Yadav) ಹಾಗೂ ಇಶಾನ್ ಕಿಶನ್ (Ishan Kishan) ಬ್ಯಾಟಿಂಗ್ ನೆರವಿನಿಂದ ಮುಂಬಯಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
ಈ ಜೋಡಿ ಕೇವಲ 55 ಎಸೆತಗಳಲ್ಲಿ ಬರೋಬ್ಬರಿ 116 ರನ್ ಗಳಿಸಿತು. ಈ ಎರಡೂ ವಿಕೆಟ್ ಗಳು ಉರುಳಿದಾಗ ಟಿಮ್ ಡೇವಿಡ್ ಹಾಗೂ ತಿಲಕ್ ವರ್ಮಾ ಸ್ಫೋಟಕ ಬ್ಯಾಟಿಂಗ್ ನೀಡಿ ಗೆಲುವು ತಂದುಕೊಟ್ಟರು. ಮೊದಲ 10 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 91 ರನ್ ಗಳಿಸಿದ್ದ ಮುಂಬಯಿ ತಂಡವೂ ಕೊನೆಯ 60 ಎಸೆತಗಳಲ್ಲಿ 124 ರನ್ ಗಳನ್ನು ಸೇರಿಸಿಕೊಂಡು ಗೆಲುವಿನ ನಗೆ ಬೀರಿತು. ಇಶಾನ್ ಕಿಶನ್ 75 ರನ್, ಸೂರ್ಯಕುಮಾರ್ ಯಾದವ್ 66 ರನ್ , ಟಿಮ್ ಡೇವಿಡ್ 19 ರನ್, ತಿಲಕ್ ವರ್ಮಾ ಸ್ಫೋಟಕ 26 ರನ್ ಸಿಡಿಸಿ ಗೆಲುವಿನಲ್ಲಿ ಸಹಕಾರ ನೀಡಿದರು.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಗೆ ಕೂಡ ಆರಂಭದ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ. ಮೊದಲ 10 ಓವರ್ಗಳಲ್ಲಿ 2 ವಿಕೆಟ್ಗೆ 78 ರನ್ ಗಳಿಸಿತ್ತು. 4ನೇ ವಿಕೆಟ್ಗೆ ಒಂದಾದ ಲಿಯಾಮ್ ಲಿವಿಂಸ್ಟೋನ್ (Liam Livingstone) ಹಾಗೂ ಜಿತೇಶ್ ಶರ್ಮಾ (Jitesh Sharma) 53 ಎಸೆತಗಳಲ್ಲಿ 119 ರನ್ ಸಿಡಿಸುವ ಮೂಲಕ ತಂಡದ ಮೊತ್ತ 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಶಿಖರ್ ಧವನ್ 30 ರನ್, ಮ್ಯಾಥಿವ್ ಶಾರ್ಟ್ 27 ರನ್, ಲಿಯಾಮ್ ಲಿವಿಂಗ್ಸ್ಟನ್ 82 ರನ್, ಜಿತೇಶ್ ಶರ್ಮಾ 49 ರನ್ ಗಳಿಸಿದರು.