Bangalore : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಮೇ. 8ರಿಂದ 13ರ ವರೆಗೆ ಮದ್ಯ ಮಾರಾಟವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಬಾರ್, ಹೋಲ್‌ಸೇಲ್ ಮಾರ್ಟ್ ಸೇರಿದಂತೆ ಮದ್ಯ ಮಾರಾಟ ಮಳಿಗೆಗಳು ಸಂಪೂರ್ಣ ಬಂದ್ ಆಗಲಿವೆ.
ಈ ಕುರಿತು ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗವು ಪತ್ರ ಬರೆದಿದ್ದು, ಅದರಂತೆ ರಾಜ್ಯ ಸರ್ಕಾರ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಎಲ್ಲಾ ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಮದ್ಯಮಾರಾಟ ಬಂದ್ ಬಗ್ಗೆ ಸುತ್ತೋಲೆ ಹೊರಡಿಸಲಿದ್ದಾರೆ.
ಮತದಾನ ಮುಕ್ತಾಯಕ್ಕೆ ನಿಗದಿಪಡಿಸಿದ ದಿನಾಂಕದ 48 ಗಂಟೆಗಳ ಮುನ್ನ ಅಂದರೆ, ಮೇ 8ರ ಬೆಳಗ್ಗೆ 6 ರಿಂದ 10 ರ ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲಾ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ಮಳಿಗೆಗಳಲ್ಲಿ ಮದ್ಯ ಮಾರಾಟ ಮತ್ತು ಪೂರೈಕೆಯನ್ನು ನಿಷೇಧಿಸಲಾಗಿದೆ. ಒಂದು ವೇಳೆ ಎಲ್ಲಾದರೂ ಮರು ಮತದಾನ ನಡೆದರೆ ಅಲ್ಲಿಗೂ ಈ ಆದೇಶ ಅನ್ವಯವಾಗಲಿದೆ.
ಮೇ 13 ರಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ಮದ್ಯದ ಅಂಗಡಿಗಳು ಬಂದ್ ಆಗಲಿವೆ. ಈ ನಾಲ್ಕು ದಿನಗಳ ಅವಧಿಯಲ್ಲಿ ಮದ್ಯ ದಾಸ್ತಾನು ಮಾಡುವುದಕ್ಕೆ ಕಡಿವಾಣ ಹಾಕಬೇಕು ಎಂದು ಆಯೋಗವು ರಾಜ್ಯ ಸರಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿತ್ತು.