ಕಾರ್ಪೊರೇಟರ್ ಪತಿಯ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿರುವ ಘಟನೆ ನಗರದ ಚಾಂದಪುರ ಕಾಲೋನಿಯಲ್ಲಿ ನಡೆದಿದೆ.

ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.19ರ ಪಕ್ಷೇತರ ಸದಸ್ಯೆ ನಿಶಾತ್ ಅವರ ಪತಿ ಹೈದರ್ ಅಲಿ ನದಾಫ್ ಮೇಲೆಯೇ ದುಷ್ಕರ್ಮಿಗಳು ಫೈರಿಂಗ್ ನಡೆಸಿ ಹತ್ಯೆಗೈದಿದ್ದಾರೆ. ಹೈದರ್ ನದಾಫ್ ಮೇಲೆ ಗುಂಡಿನ ದಾಳಿ ನಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟದ್ದಾರೆ. ನಗರದಲ್ಲಿನ ಚಾಂದಪೂರ ಕಾಲೋನಿಯಲ್ಲಿನ ತನ್ನ ನಿವಾಸದಿಂದ ಹೊರ ಬಂದು ಕಾರು ಹತ್ತುತ್ತಿದ್ದ ಸಂದರ್ಭದಲ್ಲಿ ಹೈದರ್ ಕಾರು ಅಡ್ಡಗಟ್ಟಿದ ದುಷ್ಕರ್ಮಿಗಳು, ಗುಂಡಿನ ದಾಳಿ ನಡೆಸಿದ್ದಾರೆ.

ದಾಳಿಯಿಂದ ತಪ್ಪಿಸಿಕೊಳ್ಳಲು ಹೈದರ್ ಓಡಿ ಹೋಗಿದ್ದಾರೆ. ಬೆನ್ನಟ್ಟಿದ್ದ ದುಷ್ಕರ್ಮಿಗಳು ನಾಲ್ಕು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಎರಡು ಗುಂಡುಗಳು ಪತ್ತೆಯಾಗಿವೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವದಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಹೈದರ್ ನದಾಫ್ ವಾರ್ಡ್ ನಂ.19 ರಿಂದ ತಮ್ಮ ಪತ್ನಿ ನಿಶಾತ್ ನದಾಫ್ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದರು. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೈದರ್ ತೊಡಗಿಸಿಕೊಂಡಿದ್ದರು ಎನ್ನಲಾಗಿದ್ದು, ಕೊಲೆಗೆ ಕಾರಣ ತಿಳಿದು ಬಂದಿಲ್ಲ.