shivamogga : ಕರ್ನಾಟಕದ ಸಂಪೂರ್ಣ ಅಭಿವೃದ್ಧಿ ಮಾಡಿ, ನಿಮ್ಮ ಪ್ರೀತಿಯ ಬಡ್ಡಿ ತೀರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ.
ಆಯನೂರಿನಲ್ಲಿ ನಡೆದ ಚುನಾವಣಾ (Election) ಪ್ರಚಾರದ ವೇಳೆ ಮಾತನಾಡಿದ ಅವರು, ಯಡಿಯೂರಪ್ಪ (BS Yediyurappa) ಅವರ ನೆಲದಿಂದ ರಾಜ್ಯದ ಜನರಿಗೆ ಗ್ಯಾರಂಟಿ ನೀಡುತ್ತೇನೆ. ರಾಜ್ಯದಲ್ಲಿ ಒಂದು ಬಲೂನ್ಗೆ ಹವಾ ತುಂಬಿದೆ. ಸುಳ್ಳು ಗಾಳಿ ತುಂಬಿ ಬಲೂನ್ ಹಾರಿಸಲು ಹಲವರು ಯತ್ನಿಸುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಮತದಾರರೇ ಆ ಬಲೂನ್ ನುಚ್ಚುನೂರು ಮಾಡಿದ್ದಾರೆ. ಹೆದರಿದ ಕಾಂಗ್ರೆಸ್ ಪ್ರಚಾರಕ್ಕೆ ಯಾರು ಯಾರನ್ನೋ ಕರೀತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ರಾಜ್ಯ ರಿವರ್ಸ್ ಗೇರ್ನಲ್ಲಿ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರು ಎಚ್ಚರಿಕೆಯಿಂದ ಇರಿ. ಬಂಡವಾಳಶಾಹಿಗಳನ್ನು ಹೊರದಬ್ಬಲು ಕಾಂಗ್ರೆಸ್ ಯೋಜಿಸಿದೆ. ಭ್ರಷ್ಟಾಚಾರ, ತುಷ್ಟೀಕರಣ ಹೊಂದಿದ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ನ ಅಭಿವೃದ್ಧಿ ಕೇವಲ ಕಾಗದದಲ್ಲಿ ಮಾತ್ರವಾಗಿತ್ತು. ಕಾಂಗ್ರೆಸ್ ರಾಜ್ಯದಲ್ಲಿ 5 ವರ್ಷದಲ್ಲಿ 10 ಲಕ್ಷ ಉದ್ಯೋಗ ನೀಡುವ ಭರವಸೆ ನೀಡಿದೆ. ಅಂದರೆ ಪ್ರತಿ ವರ್ಷ 2 ಲಕ್ಷ ಉದ್ಯೋಗ ನೀಡುತ್ತದೆ. ಕಾಂಗ್ರೆಸ್ ಸುಳ್ಳು ಭರವಸೆ ಇಲ್ಲೇ ಗೊತ್ತಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಫಸಲ್ ವಿಮಾ ಯೋಜನೆಯಡಿ 1.30 ಲಕ್ಷ ಕೋಟಿ ರೂ ಅನುದಾನ ನೀಡಲಾಗಿದೆ. ರಾಜ್ಯದ ಜನರಿಗೂ 10 ಸಾವಿರ ಕೋಟಿ ಸಿಕ್ಕಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 18 ಸಾವಿರ ಕೋಟಿ ಹಣ ನೇರವಾಗಿ ರೈತರಿಗೆ ತಲುಪುತ್ತದೆ ಎಂದು ಹೇಳಿದ್ದಾರೆ.