ಸದ್ಯ ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಹೀಗಾಗಿ ಎಲ್ಲ ಪಕ್ಷಗಳು ಶಕ್ತಿ ಮೀರಿ ಜನರ ಮನಸ್ಸು ಸೆಳೆಯಲು ಪ್ರಯತ್ನಿಸುತ್ತಿವೆ. ಅತಿರತ ಮಹಾರಾತ ಎನಿಸಿಕೊಂಡಿದ್ದ ನಾಯಕರುಗಳು ರಾಜ್ಯದಲ್ಲಿಯೇ ಬೀಡು ಬಿಟ್ಟಿರುವುದು ಕೂಡ ಈ ಬಾರಿ ಎಲ್ಲ ಪಕ್ಷಗಳ ಆತ್ಮವಿಶ್ವಾಸ ಕುಗ್ಗಿಸಿದೆ ಎಂಬುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಮೂರು ಪಕ್ಷಗಳ ಮಧ್ಯೆ ಬಿಗ್ ಫೈಟ್ ಇದೆಯಾದರೂ ಬಹುಮತ ಪಡೆದು ಅಧಿಕಾರ ಗಳಿಸಲು ಮಾತ್ರ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿ ನಡೆಸುತ್ತಿವೆ. ಜೆಡಿಎಸ್ ಸಮ್ಮಿಶ್ರಕ್ಕಾಗಿ ಮಾತ್ರ ಹೋರಾಟ.

ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಹೈಕಮಾಂಡ್ ಸೂಚಿಸಿದ ವ್ಯಕ್ತಿ ಸಿಎಂ ಅಭ್ಯರ್ಥಿ. ಬಿಜೆಪಿಯಲ್ಲಿ ಯಾವ ವ್ಯಕ್ತಿ ಸಿಎಂ ಆಗಬಹುದು ಎಂದು ಹೇಳುವುದು ಕಷ್ಟ. ಯಾವ ಮಾನದಂಡಗಳ ಮೇಲೆ ಬಿಜೆಪಿ ತನ್ನ ಸಿಎಂ ಅಭ್ಯರ್ಥಿಯನ್ನು ಗುರುತಿಸುತ್ತದೆ ಎಂದು ಹೇಳುವುದು ಕಷ್ಟ. ಹೀಗಾಗಿ ಅಲ್ಲಿ ಹಲವಾರು ಅಭ್ಯರ್ಥಿಗಳು ತಮಗೆ ಸಿಎಂ ಲಾಟರಿ ಹೊಡೆಯಲಿ ಎಂದೇ ದೇವರಲ್ಲಿ ಧ್ಯಾನಿಸುತ್ತಿರುವುದು. ಆದರೆ, ಕಾಂಗ್ರೆಸ್ ನ ವಿಷಯಕ್ಕೆ ಬಂದರೆ ಹಾಗಿಲ್ಲ.

ಕಾಂಗ್ರೆಸ್ ನಲ್ಲಿ ಕೂಡ ಹಿರಿಯ ನಾಯಕರು ಹಲವರಿದ್ದರು ಕೂಡ ಸಿಎಂ ರೇಸ್ ನ ಮುಂಚೂಣಿಯಲ್ಲಿರುವುದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್. ಈ ಹಿಂದೆ ಒಂದು ಬಾರಿ ಸಿಎಂ ಆಗಿ ಹಲವಾರು ಕೆಲಸಗಳನ್ನು ಮಾಡಿ, ಜನಮಾನಸದಲ್ಲಿ ಉಳಿದಿರುವ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಸಿಎಂ ಆಗುವ ಕನಸು ಕಾಣುತ್ತಿದ್ದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಬಾರಿ ಸಿಎಂ ಆಗಲೇಬೇಕು ಎಂದು ಪಣತೊಟ್ಟಂತೆ ವರ್ತಿಸುತ್ತಿದ್ದಾರೆ. ಈ ಬಾರಿ ಆಡಳಿತ ವಿರೋಧಿ ಅಲೆಯ ಲಾಭವನ್ನು ಕಾಂಗ್ರೆಸ್ ಮಾಡಿಕೊಳ್ಳಲಿದೆ ಎಂದು ಸಮೀಕ್ಷೆ ಹೊರ ಬೀಳುತ್ತಿದ್ದಂತೆ, ಸಿದ್ದ ಹಾಗೂ ಡಿಕೆಶಿ ಮಧ್ಯೆ ಸಿಎಂ ರೇಸ್ ಹಾಗೂ ತಂತ್ರ ಹೆಚ್ಚಾಗುತ್ತ ಸಾಗಿತು. ಇಬ್ಬರೂ ಒಬ್ಬರ ಕಾಲು ಒಬ್ಬರು ಎಳೆಯಲು ಆರಂಭಿಸಿದರು. ಒಬ್ಬರನ್ನೊಬ್ಬರು ಹಿಂಬಾಗಿಲಿನಿಂದ ತುಳಿಯುವ ಕಾರ್ಯ ಮಾಡಿದರು. ಕಾಂಗ್ರೆಸ್ ನಲ್ಲಿಯೇ ತಮ್ಮ ತಮ್ಮ ಶಕ್ತಿ ಪ್ರದರ್ಶನ ಮಾಡತೊಡಗಿದರು. ತಮ್ಮ ಬೆಂಬಲಿಗರಿಗೆ ಹೆಚ್ಚಾಗಿ ಸೀಟ್ ಕೊಡಿಸಿ, ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳುವ ಪ್ರಯತ್ನ ಮಾಡಿದರು.

ಹೀಗಾಗಿಯೇ ಹಲವಾರು ಬಲಿಷ್ಠ ವ್ಯಕ್ತಿಗಳಿಗೆ ಸೀಟ್ ಸಿಗದಂತಾಯಿತು. ಹಲವರು ಬೇರೆ ಬೇರೆ ಪಕ್ಷಗಳನ್ನು ತೊರೆದು ಬಂದು, ಇವರಿಬ್ಬರ ಜಗಳದಲ್ಲಿ ಟಿಕೆಟ್ ವಂಚಿತರಾಗಿ ನೋವು ಅನುಭವಿಸಿದರು. ಆದರೆ, ಇವರ ವರ್ತನೆ ಮೀತಿ ಮಿರುತ್ತಿದ್ದಂತೆ…ಇದು ಸಿಎಂಗಾಗಿನ ತಂತ್ರವೇ ಇರಬಹುದು ಎಂದು ಸಾಮಾನ್ಯ ವ್ಯಕ್ತಿಗಳು ಯಾವಾಗ ಮಾತನಾಡಲು ಶುರು ಮಾಡಿದರೋ ಹಾಗೂ ವಿರೋಧ ಪಕ್ಷಗಳು ಕಾಲು ಎಳೆದು ವ್ಯಂಗ್ಯವಾಡಲು ಪ್ರಾರಂಭಿಸಿದರೋ ಆಗ ಇವರಿಬ್ಬರು ಎಚ್ಚೆತ್ತುಕೊಂಡಿದ್ದಾರೆ.

ಅದರಲ್ಲಿಯೂ ಚುನಾವಣೆ ಹತ್ತಿರವಾಗುತ್ತಿದಂತೆ ಈ ಇಬ್ಬರು ನಾಯಕರ ಗುಣದಲ್ಲಿ ಸಾಕಷ್ಟು ಬದಲಾವಣೆ ಆದಂತೆ ಕಾಣುತ್ತಿದೆ. ಯಾವುದೇ ಕಾರಣಕ್ಕೆ ಸಿಎಂ ಸ್ಥಾನದ ನಮ್ಮ ಹಪ ಹಪಿ ಜನರಿಗೆ ತೊಂದರೆ ಮಾಡಬಾರದು. ಕಾರ್ಯಕರ್ತರಿಗೆ ಇರಿಸು ಮುರಿಸು ಉಂಟು ಮಾಡಬಾರದು ಎಂಬ ಕಾರಣಕ್ಕೆ ಇಬ್ಬರು ಸಾಕಷ್ಟು ಬಾರಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಅದರಲ್ಲಿಯೂ ಚುನಾವಣೆ ಹೇಗೆ ಹತ್ತಿರ ಹತ್ತಿರ ಬರುತ್ತಿದೆಯೋ ಹಾಗೆ ಇವರ ಒಗ್ಗಟ್ಟು ವೃದ್ಧಿಯಾಗುತ್ತ ಸಾಗುತ್ತಿದೆ ಎನ್ನುವಂತೆ ವರ್ತಿಸುತ್ತಿದ್ದಾರೆ.

ಈ ಹಿಂದೆ ಇವರಿಬ್ಬರ ಮುಖ್ಯಮಂತ್ರಿ ಆಸೆಯೇ ಪಕ್ಷಕ್ಕೆ ಡ್ಯಾಮೇಜ್ ಮಾಡಲಿದೆ ಎನ್ನಲಾಗುತಿತ್ತು. ಹೀಗಾಗಿಯೇ ಸದ್ಯ ಇವರಿಬ್ಬರು ಮುಖ್ಯಮಂತ್ರಿ ರೇಸ್ಗಿಂತ ಪಕ್ಷ ಗೆಲ್ಲೋದೆ ಮುಖ್ಯ ಅನ್ನೋ ರೀತಿ ಮೆಸೇಜ್ ಪಾಸ್ ಮಾಡಿದ್ದಾರೆ. ಒಂದು ಕಡೆ ಬಿಜೆಪಿಯಲ್ಲಿ ಬೊಮ್ಮಾಯಿ ಕಾಟಕ್ಕೆ ಜಗದೀಶ ಶೆಟ್ಟರ್ ಪಕ್ಷ ತೊರೆದಿದ್ದರೆ, ಕಾಂಗ್ರೆಸ್ ನಲ್ಲಿ ಟಗರು, ಬಂಡೆ ನಾವಿಬ್ಬರು ಒಂದೇ ಎಂಬ ಸಂದೇಶ ಸಾರುತ್ತಿದ್ದಾರೆ. ಹೀಗಾಗಿಯೇ ಇಬ್ಬರು ಒಟ್ಟಿಗೆ ಇರುವ, ಒಗ್ಗಟ್ಟಾಗಿ ಇರುವ ವಿಡಿಯೋಗಳನ್ನು ಹರಿ ಬಿಡುತ್ತಿದ್ದಾರೆ. ಇಬ್ಬರು ಫೋಟೋ ಶೂಟ್ ಮಾಡಿಕೊಳ್ಳುತ್ತಿದ್ದಾರೆ. ಇನ್ನೇನು ಮತದಾನದ ದಿನ ಹತ್ತಿರ ಬರುತ್ತಿರುವಾಗ ವಿಡಿಯೋ ಹರಿ ಬಿಟ್ಟಿದ್ದಾರೆ. ಒಗ್ಗಟ್ಟಿನ ಮಂತ್ರವನ್ನ ಸಾಮಾಜಿಕ ಜಾಲ ತಾಣದ ಮೂಲಕ ಹರಿ ಬಿಟ್ಟಿದ್ದಾರೆ. ಇದು ಕೇವಲ ಪ್ರೋಮೋ ಪೂರ್ತಿ ವಿಡಿಯೋದಲ್ಲಿ ಹಲವು ಸಂದೇಶ ಸಾರಿದ್ದಾರೆ. ನಾವಿಬ್ಬರು ಒಂದಾಗಿದ್ದೇವೆ. ನಮಗೆ ಅಧಿಕಾರದ ಆಸೆ ಇಲ್ಲ. ನಮಗೆ ಪಕ್ಷ ಗೆಲ್ಲುವುದೇ ಮುಖ್ಯ ಎಂದು ಹೇಳಿದ್ದಾರೆ.

ಆದರೆ, ಈಗ ಏನೇ ತೋರಿಸಿದರೂ ಇದು ಚುನಾವಣೆ ಗಿಮಿಕ್ ಎನ್ನುವುದು ಮಾತ್ರ ಮತದಾರರಿಗೆ ಚೆನ್ನಾಗಿ ಗೊತ್ತು. ಫಲಿತಾಂಶ ಬಂದಾಗ ಒಂದು ವೇಳೆ ನಿಜವಾಹಗಿಯೂ ಕಾಂಗ್ರೆಸ್ ಬಹುಮತ ಗಳಿಸಿದರೆ, ಇವರಿಬ್ಬರ ವರ್ತನೆ ಹೀಗೆಯೇ ಇದ್ದು, ಬೇರೆಯವರಿಗೆ ಅವಕಾಶವೋ ಅಥವಾ ಇವರಿಬ್ಬರೇ ಒಂದಾಗಿ ಅಧಿಕಾರ ಅನುಭವಿಸಿದರೆ, ಆಗ ನಿಜವಾಗಿಯೂ ಇದು ಸ್ವಾರ್ಥಕ್ಕಿಂತ ಪಕ್ಷಕ್ಕಿರುವ ನಿಯತ್ತು ಎನ್ನಬಹುದು. ಏನೇ ಆಗಲಿ, ಇನ್ನೇನು ಕೆಲವೇ ದಿನಗಳಲ್ಲಿ ಇವರಿಬ್ಬರೇ ಅಲ್ಲ, ಎಲ್ಲ ನಾಯಕರ ನಿಜ ಬಣ್ಣ ಬಯಲಿಗೆ ಬರಲಿದೆ. ಅಲ್ಲಿಯವರೆಗೆ ಕಾಯ್ದು ನೋಡಬೇಕು ಅಷ್ಟೇ…..

