Bangalore : ಮೇ 10ರಂದು ಮತದಾನ ಇರುವ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಸಭೆ, ಸಮಾರಂಭ, ಉತ್ಸವ, ರ್ಯಾಲಿಗಳಿಗೆ ಇಂದು ಸಂಜೆಯಿಂದಲೇ ತೆರೆ ಬೀಳಲಿದೆ.
ಸಂಜೆ 5ರ ನಂತರ ಧ್ವನಿ ವರ್ಧಕಗಳ ಬಳಕೆ ಮಾಡುವಂತಿಲ್ಲ. ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಅಭ್ಯರ್ಥಿ ಸೇರಿ 6 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆಯಾ ಕ್ಷೇತ್ರಗಳ ಅಭ್ಯರ್ಥಿಗಳು ಹೊರತುಪಡಿಸಿ, ಹೊರಗಿನಿಂದ ಬಂದ ಸ್ಟಾರ್ ಪ್ರಚಾರಕರು ಮತ್ತು ಘಟಾನುಘಟಿ ನಾಯಕರು ತಮ್ಮ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರವನ್ನು ನಿಲ್ಲಿಸಬೇಕಿದೆ.
ಹೀಗಾಗಿ ಸ್ಟಾರ್ ಪ್ರಚಾರಕರು ಮತ್ತು ಘಟಾನುಘಟಿ ನಾಯಕರು ಚುನಾವಣಾ ಪ್ರಚಾರದಿಂದ ದೂರ ಸರಿಯುವುದರ ಜೊತೆಗೆ ತಮ್ಮದಲ್ಲದ ಕ್ಷೇತ್ರಗಳಿಂದಲೂ ಹಿಂದೆ ಸರಿಯಬೇಕಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮನೆ ಮನೆ ಪ್ರಚಾರ ನಡೆಸಲಿದ್ದಾರೆ. ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಠಿಕಾಣಿ ಹೂಡಿ, ಪ್ರಚಾರದಲ್ಲಿ ತೊಡಗಲಿದ್ದಾರೆ.
ಹೀಗಾಗಿ ಮೂರೂ ಕ್ಷೇತ್ರದ ಘಟಾನುಘಟಿ ನಾಯಕರು ಇಂದು ಕೊನೆ ಹಂತದ ಪ್ರಚಾರಕ್ಕೆ ಭಾರೀ ಸಿದ್ಧತೆಗಳನ್ನು ನಡೆಸಿದ್ದಾರೆ. ಸ್ವಕ್ಷೇತ್ರ ಶಿಗ್ಗಾಂವಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತಯಾಚನೆ ಮಾಡಲಿದ್ದಾರೆ. ವರುಣಾದಲ್ಲಿ ಸಿದ್ದರಾಮಯ್ಯ, ಕನಕಪುರದಲ್ಲಿ ಡಿಕೆಶಿ, ರಾಮನಗರದಲ್ಲಿ ಕುಮಾರಸ್ವಾಮಿ, ದೇವೇಗೌಡ ಪ್ರಚಾರ ನಡೆಸಲಿದ್ದಾರೆ. ಅಲ್ಲದೇ, ಇಂದು ಕುಮಾರಸ್ವಾಮಿ ತಮ್ಮ ಕ್ಷೇತ್ರ ಚನ್ನಪಟ್ಟಣದಲ್ಲಿ ಪ್ರಚಾರ ನಡೆಸಲಿದ್ದಾರೆ.