ತಿರುವನಂತಪುರಂ : ಪ್ರವಾಸಿ ದೋಣಿ (Tourist Boat) ಮುಳುಗಡೆಯಾಗಿ 22 ಜನ ಸಾವನ್ನಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಕೇರಳ ಸರ್ಕಾರ (Kerala Government) ಘೋಷಿಸಿದೆ.
ಪ್ರವಾಸಿ ದೋಣಿ ದುರಂತದ ಕುರಿತು ಕೇರಳ ಸರ್ಕಾರವು ಸಂಪೂರ್ಣ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಕೂಡ ಸರ್ಕಾರವೇ ಭರಿಸಲಿದೆ. ಪೊಲೀಸ್ ವಿಶೇಷ ತನಿಖಾ ತಂಡವು ಈ ಕುರಿತು ತನಿಖೆ ನಡೆಸಲಿದೆ ಎಂದು ಸಿಎಂಒ ಮಾಹಿತಿ ನೀಡಿದೆ.
ಮೃತಪಟ್ಟ ಕುಟುಂಬಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಂತಾಪ ಸೂಚಿಸಿದ್ದು, ಪರಿಹಾರ ನಿಧಿಯಿಂದ 2 ಲಕ್ಷ ರೂ. ಘೋಷಿಸಿದ್ದಾರೆ. ಕೇರಳದ ಮಲಪ್ಪುರಂನಲ್ಲಿ ದೋಣಿ ದುರಂತದಿಂದ ಪ್ರಾಣಹಾನಿಯಾಗಿರುವುದು ನೋವು ತಂದಿದೆ. ಮೃತ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಪಿಎಂಎನ್‍ಆರ್ ಎಫ್‍ನಿಂದ 2 ಲಕ್ಷ ರೂ.ವನ್ನು ಅವರ ಸಂಬಂಧಿಕರಿಗೆ ನೀಡಲಾಗುವುದು ಎಂದು ಪ್ರಧಾನಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಸುಮಾರು 30 ಜನರಿದ್ದ ಪ್ರವಾಸಿ ದೋಣಿಯು ಭಾನುವಾರ ಮಲಪ್ಪುರಂನ ತನೂರಿನ ತೂವಲ್ತೀರಂ ಕಡಲತೀರದ ಸಮೀಪ ಸಂಜೆ 7 ಗಂಟೆ ಸುಮಾರಿಗೆ ಮುಳುಗಡೆಯಾಗಿತ್ತು. ಘಟನೆಯಲ್ಲಿ 22 ಮಂದಿ ಸಾವನ್ನಪ್ಪಿದ್ದು, ಸುಮಾರು 7 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.