Dubai : ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಯ ಏಷ್ಯಾಕಪ್ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸುವ ಪ್ರಸ್ತಾವನೆಯನ್ನು ಸದಸ್ಯ ರಾಷ್ಟ್ರಗಳು ತಿರಸ್ಕರಿಸಿದ ನಂತರ ಏಷ್ಯಾಕಪ್ ಟೂರ್ನಿಯನ್ನು ಆ ದೇಶದಿಂದಲೇ ಸ್ಥಳಾಂತರಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ನಿರ್ಧರಿಸಿದೆ.
ಸೆ. 2ರಿಂದ 17ರ ವರೆಗೆ ನಡೆಯಲಿರುವ ಏಕದಿನ ಏಷ್ಯಾಕಪ್ ನಲ್ಲಿ ಭಾರತ, ಪಾಕಿಸ್ತಾನ, ಯುಎಇ, ಅಫ್ಘಾನಿಸ್ತಾನ, ಶ್ರೀಲಂಕಾ (SriLanka) ಹಾಗೂ ಬಾಂಗ್ಲಾದೇಶ ಸೇರಿದಂತೆ ಒಟ್ಟು 6 ದೇಶಗಳು ಭಾಗವಹಿಸಲಿವೆ. ಶ್ರೀಲಂಕಾ ಮುಂಚೂಣಿಯಲ್ಲಿದ್ದು, ಈ ಬಾರಿ ಆತಿಥ್ಯ ವಹಿಸಿಕೊಳ್ಳುವ ಸಾಧ್ಯತೆಯಿದೆ. ಆತಿಥ್ಯ ಕೈತಪ್ಪಿದಲ್ಲಿ ಪಾಕಿಸ್ತಾನ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತದೆಯೇ ಇಲ್ಲವೇ ಎಂಬುವುದು ಕೂಡ ಯಕ್ಷ ಪ್ರಶ್ನೆಯಾಗಿದೆ.
ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿರಾಕರಿಸಿದ ನಂತರ ಪಿಸಿಬಿ ಹೈಬ್ರಿಡ್ ಮಾದರಿಯ ಪ್ರಸ್ತಾವನೆಯನ್ನು ಐಸಿಸಿ ಮುಂದಿಟ್ಟಿತ್ತು. ಪಾಕಿಸ್ತಾನವು ಆತಿಥೇಯ ದೇಶಗಳೊಂದಿಗೆ ತವರಿನಲ್ಲಿ ಹಾಗೂ ಭಾರತ ಪ್ರತಿಸ್ಪರ್ಧಿ ದೇಶಗಳೊಂದಿಗೆ ಆಡುವಾಗ ತಟಸ್ಥ ಸ್ಥಳದಲ್ಲಿ ಆಡಬಹುದು ಎಂದು ಹೇಳಿತ್ತು. ಸದಸ್ಯ ರಾಷ್ಟ್ರಗಳು ಈ ಪ್ರಸ್ತಾಪವನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಪಾಕ್ ನಿಂದ ಟೂರ್ನಿಯನ್ನು ಬೇರೆಡೆಗೆ ಸ್ಥಳಾಂತರಸಿಲಾಗುತ್ತಿದೆ. ಈ ಕುರಿತು ಮತ್ತೊಂದು ಸುತ್ತಿನ ಮಾತುಕತೆ ಕೂಡ ನಡೆಯುತ್ತಿದೆ ಎನ್ನಲಾಗುತ್ತಿದೆ.
ಭಾರತ ತಂಡವು 2005-2006ರಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಪಾಕಿಸ್ತಾನಕ್ಕೆ ತನ್ನ ಕೊನೆಯ ಪ್ರವಾಸ ಕೈಗೊಂಡಿತ್ತು. ಈ ಪಂದ್ಯದಲ್ಲಿ ಇತ್ತಂಡಗಳು 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನಾಡಿದ್ದವು. 2008ರಲ್ಲಿ ನಡೆದ ಮುಂಬೈ ದಾಳಿಯ ನಂತರ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ.