ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅರೆಸ್ಟ್ ಮಾಡಲಾಗಿದೆ.
ಪಾಕಿಸ್ತಾನದ ಹೈಕೋರ್ಟ್ ಆವರಣದಲ್ಲಿಯೇ ಪ್ಯಾರಾ ಮಿಲಿಟರಿ ಪಡೆ ಬಂಧಿಸಿದೆ. ಹೀಗಾಗಿ ಕೋರ್ಟ್ ಆವರಣದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದ್ದು ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಲಾಹೋರ್ ನಿವಾಸದಲ್ಲಿಯೇ ಇಮ್ರಾನ್ ಖಾನ್ ಅವರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು. ಆದರೆ, ಆ ಸಂದರ್ಭದಲ್ಲಿ ಪಿಟಿಐ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅವರ ಬಂಧನವಾಗಿರಲಿಲ್ಲ.
ಉಡುಗೊರೆಯಾಗಿ ಪಡೆದ ಕೋಟ್ಯಂತರ ರೂ. ಮೌಲ್ಯದ ನೆಕ್ಲೆಸ್ ಅನ್ನು ಉಡುಗೊರೆ ಭಂಡಾರಕ್ಕೆ ಠೇವಣಿ ಇಡುವ ಬದಲು, ಆಭರಣ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿರುವ ಆರೋಪವನ್ನು ಇಮ್ರಾನ್ ಎದುರಿಸುತ್ತಿದ್ದಾರೆ. ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದುಬಾರಿ ಮೌಲ್ಯದ ನೆಕ್ಲೆಸ್ ಉಡುಗೊರೆಯಾಗಿ ಬಂದಿತ್ತು. ಆದರೆ ಅದನ್ನು ರಾಜ್ಯದ ಉಡುಗೊರೆ ಭಂಡಾರಕ್ಕೆ ಠೇವಣಿ ಇಡದೆ ವ್ಯಾಪಾರಿಯೊಬ್ಬರಿಗೆ 18 ಕೋಟಿ ಪಾಕಿಸ್ತಾನ ರೂ.ಗೆ ಮಾರಾಟ ಮಾಡಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಕುರಿತು ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ತನಿಖೆ ನಡೆಸಿತ್ತು.
ವಿಪಕ್ಷಗಳ ಅವಿಶ್ವಾಸ ಮತದಿಂದಾಗಿ ಇಮ್ರಾನ್ ಖಾನ್, ಪಾಕಿಸ್ತಾನ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಈಗ ಶೆಹಬಾಜ್ ಶರೀಫ್ ಅವರು ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ. ಖಾನ್ ರಾಜೀನಾಮೆ ಬೆನ್ನಲ್ಲೇ ಅವರ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದು, ತನಿಖೆ ನಡೆಯುತ್ತಿವೆ.