ಬೆಂಗಳೂರು: ರಾಜ್ಯದ ಹಲವು ಪ್ರದೇಶಗಳಲ್ಲಿ ಇಂದು ಮಳೆರಾಯ(Rain) ತನ್ನ ಆರ್ಭಟ ನಡೆಸಿದ್ದಾರೆ. ಅಲ್ಲದೇ, ನಾಳೆಯೂ ಮಳೆಯಾಗುವ ಸಾಧ್ಯತೆ ಇರುವುದರಿಂದಾಗಿ ಮತದಾನದ ಮೇಲೆ ಕರಿನೆರಳು ಬೀರುವಂತಾಗಿದೆ.
ಹುಬ್ಬಳ್ಳಿ (Hubballi) ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಭರ್ಜರಿ ಮಳೆಯಾಗಿದ್ದು, ರಸ್ತೆಗಳೆಲ್ಲ ನೀರಿನಲ್ಲಿ ಮುಳುಗಿ ಹೋಗಿವೆ. ರಸ್ತೆಯ ಮೇಲೆ ನದಿಯಂತೆ ನೀರು ಹರಿದಿದೆ. ಅಲ್ಲದೇ, ನೀರಿನ ರಭಸಕ್ಕೆ ಹಲವು ಬೈಕ್ ಗಳು ಕೊಚ್ಚಿ ಹೋಗಿವೆ. ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಜನರು ಪರದಾಟ ನಡೆಸಿದ್ದಾರೆ.
ರಾಮನಗರ, ಕೋಲಾರ, ಯಾದಗಿರಿ, ತುಮಕೂರಿನ ಹಲವಡೆಯೂ ಮಳೆಯಾಗಿದೆ. ಹಲವೆಡೆ ಗುಡುಗು ಸಿಡಿಲಿನೊಂದಿಗೆ ಮಳೆ ಆರ್ಭಟಿಸಿದೆ. ಕೊಪ್ಪಳದ ಯಲಬುರ್ಗಾದಲ್ಲಿ ಸಿಡಿಲು ಬಡಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ. ಜಗಳೂರಿನಲ್ಲಿ ಮೇಕೆಗೆ ಸೊಪ್ಪು ಹಾಕುವುದಕ್ಕಾಗಿ ಮರವೇರಿದ ಯುವಕ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದಾನೆ. ಕಲಬುರಗಿಯ ಆಳಂದ, ದಾವಣಗೆರೆ, ಹಾವೇರಿಯ ಶಿಗ್ಗಾಂವಿ ಸೇರಿ ಹಲವೆಡೆ ಭರ್ಜರಿ ಮಳೆಯಾಗಿದೆ.
ಬೀದರ್, ರಾಯಚೂರು, ವಿಜಯಪುರ, ಬಳ್ಳಾರಿ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ನಾಳೆ ಮಳೆಯಾಗುವ ಸಾಧ್ಯತೆ ಇದೆ. ಅಲ್ಲದೇ, ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.