Vijayapur : ಗ್ರಾಮಸ್ಥರ ತಪ್ಪು ತಿಳುವಳಿಕೆಯಿಂದಾಗಿ ದೊಡ್ಡ ಅವಾಂತರವೊಂದು ಜಿಲ್ಲೆಯಲ್ಲಿ ನಡೆದಿದೆ.
ಗ್ರಾಮಸ್ಥರೇ ಮತಯಂತ್ರಗಳನ್ನು (Voting Machine) ಒಡೆದು ಪುಡಿಪುಡಿ ಮಾಡಿದ ಘಟನೆ ವಿಜಯಪುರ (Vijayapura) ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮತಯಂತ್ರ ಕೆಟ್ಟಲ್ಲಿ ಬಳಕೆಗೆ ಎಂದು ರಿಸರ್ವ್ ಇಡಲಾಗಿದ್ದ ಇವಿಎಂ (EVM), ವಿವಿಪ್ಯಾಟ್ ಮಶೀನ್‍ಗಳಾಗಿದ್ದವು. ಅವುಗಳನ್ನು ಸಿಬ್ಬಂದಿಯು ಮರಳಿ ತರುವುದುನ್ನು ಗಮನಿಸಿ, ಜನರು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿ ಸರಿಯಾಗಿ ಉತ್ತರಿಸದಿದ್ದಾಗ ತಪ್ಪು ಭಾವಿಸಿ ಮತಯಂತ್ರ ಒಡೆದು ಹಾಕಿದ್ದಾರೆ.
ಕಾಯ್ದಿರಿಸಲಾಗಿದ್ದ ಮತಯಂತ್ರಗಳನ್ನು ಬಿಸನಾಳ, ಡೋಣುರ ಗ್ರಾಮದಿಂದ ವಿಜಯಪುರಕ್ಕೆ ಮರಳಿ ತೆಗೆದುಕೊಂಡು ಬರುತ್ತಿದ್ದಾಗ ಈ ಘಟನೆ ನಡೆದಿದೆ. ಅರ್ಧಕ್ಕೆ ಮತದಾನ ಕಾರ್ಯ ಸ್ಥಗಿತಗೊಳಿಸಿ ವಾಪಸ್ ಕೊಂಡೊಯ್ಯಲಾಗುತ್ತಿದೆ ಎಂದು ತಪ್ಪು ಭಾವಿಸಿ ಮತ ಯಂತ್ರ ಒಡೆದು ಹಾಕಿದ್ದಾರೆ. ಅಲ್ಲದೇ, ಘಟನೆಯಲ್ಲಿ ಅಧಿಕಾರಿಗಳ ಕಾರನ್ನು ಜಖಂಗೊಳಿಸಲಾಗಿದೆ. ಸಿಬ್ಬಂದಿಗೂ ಥಳಿಸಿದ್ದಾರೆ. ಘಟನೆಯಿಂದಾಗಿ ಮಸಬಿನಾಳ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಆದರೂ ಸಹ ಮತದಾನ ಪ್ರಕ್ರಿಯೆ ಮುಂದುವರಿದಿದೆ.