ನಾವು ಅಂದುಕೊಂಡಂತೆ ಮತದಾರರು ಈ ಬಾರಿ ನಮಗೆ ಆಶೀರ್ವಾದ ಮಾಡಿದ್ದಾರೆ. ನಾವು ಘೋಷಿಸಿದ ಗ್ಯಾರಂಟಿಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಜಾರಿ ಮಾಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸುತ್ತಿದ್ದಂತೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಅವರು, ಫಲಿತಾಂಶ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದದ ವಿರುದ್ಧದ ಫಲಿತಾಂಶ. ಇದು ಕೇವಲ ಕಾಂಗ್ರೆಸ್ ಪಕ್ಷದ ಗೆಲುವಲ್ಲ, ಇದು ಕರ್ನಾಟಕದ ಗೆಲುವು. ಕನ್ನಡಿಗರ ಗೆಲುವು, ಪ್ರಜಾಪ್ರಭುತ್ವದ ಗೆಲುವು. ಈ ಗೆಲುವಿಗಾಗಿ ರಾಜ್ಯದ ಸಮಸ್ತ ಕನ್ನಡಿಗರೂ ಅಭಿನಂದಿಸುತ್ತೇನೆ. ಯಾವುದೇ ಚುನಾವಣೆಯಲ್ಲಿ ಕೇವಲ ರಾಜಕೀಯ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮಾತ್ರವಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲದ ಅಭಿಮಾನಿಗಳು ರಾತ್ರಿ ಹಗಲು ಶ್ರಮಪಟ್ಟಿರುತ್ತಾರೆ. ಅವರೆಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳು ಎಂದು ಬರೆದಿದ್ದಾರೆ.
ಈ ಚುನಾವಣೆಯಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರು ನಡೆಸಿರುವ ಪ್ರಯತ್ನವನ್ನು ಮರೆಯಲಾಗದು. ಬಹಳ ಮುಖ್ಯವಾಗಿ ಕರ್ನಾಟಕದ ಚುನಾವಣಾ ಪ್ರಚಾರ ಪ್ರಾರಂಭವಾಗಿದ್ದೇ ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯಿಂದ. ಈ ಯಾತ್ರೆ ಇಡೀ ಕರ್ನಾಟಕದಲ್ಲಿ ಸಂಚಲನ ಉಂಟುಮಾಡಿತ್ತು. ನಮ್ಮ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿತ್ತು. ಈ ಫಲಿತಾಂಶದ ಶ್ರೇಯಸ್ಸು ಅವರಿಗೂ ಸಲ್ಲುತ್ತದೆ ಎಂದು ಹೇಳಿದ್ದಾರೆ.
ಕಾಲದಲ್ಲಿ ನಾವು ಪ್ರಣಾಳಿಕೆಯ ಮೂಲಕ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಿರುವುದು. ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ನಾವು ಈಡೇರಿಸುತ್ತೇವೆ. ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ನಮ್ಮ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ರಾಜ್ಯದ ಜನತೆ ಇನ್ನು ನೆಮ್ಮದಿಯಿಂದ ಇರಬಹುದು. ರಾಜ್ಯದ ಜನತೆಯ ಕಲ್ಯಾಣ ಮಾತ್ರವಲ್ಲ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯ ಬದುಕು ಕೂಡಾ ನಮ್ಮ ಗ್ಯಾರಂಟಿ. ನಮ್ಮ ಪಕ್ಷದ ಕಾರ್ಯಕರ್ತರು ಸಂಯಮದಿಂದ ವಿಜಯೋತ್ಸವವನ್ನು ಆಚರಿಸಬೇಕು. ಎದುರಾಳಿಗಳು ಸೋಲಿನ ಹತಾಶೆಯಿಂದ ಪ್ರಚೋದಿಸಿದರೂ ನಮ್ಮ ಕಾರ್ಯಕರ್ತರು ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಕಿವಿ ಮಾತು ಹೇಳಿದ್ದಾರೆ.