Mumbai : ರೋಹಿತ್ ಶರ್ಮಾ ಪಡೆ ಕೊನೆಯ ಸಮಯದಲ್ಲಿ ಉತ್ತಮ ಲಯ ಕಂಡುಕೊಂಡಿದ್ದು, ಭರ್ಜರಿ ಪ್ರದರ್ಶನ ನೀಡುತ್ತಿದೆ. ಸೂರ್ಯಕುಮಾರ್ ಯಾದವ್ (SuryaKumar Yadav) ಅವರ ಸ್ಫೋಟಕ ಶತಕದ ನೆರವಿನಿಂದಾಗಿ ಸದ್ಯ ಮುಂಬಯಿ ಇಂಡಿಯನ್ಸ್ (Mumbai Indians) ತಂಡವು ಗುಜರಾತ್ (Gujarat Titans) ವಿರುದ್ಧ 27 ರನ್ ಗಳ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬಯಿ 5 ವಿಕೆಟ್ ನಷ್ಟಕ್ಕೆ 218 ರನ್ ಗಳಿಸಿತು. ಗೆಲ್ಲಲು 219 ರನ್ ಗಳ ಕಠಿಣ ಸವಾಲು ಪಡೆದ ಗುಜರಾತ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿ ಸೋಲು ಅನುಭವಿಸಿತು. ಈ ಗೆಲುವಿನೊಂದಿಗೆ 14 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಜಿಗಿದರೆ ಗುಜರಾತ್ 16 ಅಂಕ ಪಡೆದು ಮೊದಲ ಸ್ಥಾನದಲ್ಲಿ ಉಳಿದಿದೆ.
ಗುಜರಾತ್ ತಂಡವು 55 ರನ್ ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು. ವಿಜಯ್ ಶಂಕರ್ 29 ರನ್, ಡೇವಿಡ್ ಮಿಲ್ಲರ್ 41 ರನ್ ಸಿಡಿಸಿ ಔಟಾದರು. ಕೊನೆಯಲ್ಲಿ ರಶೀದ್ ಖಾನ್ ಸ್ಫೋಟಕ ಅರ್ಧಶತಕ ಸಿಡಿಸಿ ಸೋಲಿನ ಅಂತರವವನ್ನು ಕಡಿಮೆ ಮಾಡಿದರು. ರಶೀದ್ ಖಾನ್ ಮತ್ತು ಜೋಸೆಫ್ 40 ಎಸೆತಗಳಲ್ಲಿ 88 ರನ್ ಜೊತೆಯಾಟದ ಕಾಣಿಕೆ ನೀಡಿದರು. ರಶೀದ್ ಖಾನ್ ಔಟಾಗದೆ 79 ರನ್ ನೀಡಿದರು.
ಮೊದಲು ಬ್ಯಾಟ್ ಮಾಡಿದ ಮುಂಬಯಿ ತಂಡವು ಉತ್ತಮ ಆರಂಭ ಪಡೆಯಿತು. ಇಶನ್ ಕಿಶನ್ ಮತ್ತು ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ 61 ರನ್‌ಗಳ ಜೊತೆಯಾಟ ಆಡಿದರು. ರೋಹಿತ್ ಶರ್ಮಾ 29 ರನ್, ಕಿಶನ್ ಕಿಶನ್ 31 ರನ್ ಸಿಡಿಸಿದರು. ನಂತರ ಬಂದ ಸೂರ್ಯಕುಮಾರ್ ಅಬ್ಬರ ಕೊನೆಯವರೆಗೂ ಮುಂದುವರೆಯಿತು. ಪರಿಣಾಮ 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಸೂರ್ಯ, 49 ಎಸೆತಗಳಲ್ಲಿ ಶತಕ ಸಿಡಿಸಿದರು. ಸೂರ್ಯಕುಮಾರ್ ಮತ್ತು ವಿಷ್ಣು ವಿನೋದ್ 4ನೇ ವಿಕೆಟ್ ಗೆ 42 ಎಸೆತಗಳಲ್ಲಿ 65 ರನ್ ಗಳಿಸಿದರು. 5ನೇ ವಿಕೆಟ್ ಗೆ ಕ್ಯಾಮರೂನ್ ಗ್ರೀನ್ ಜೊತೆ 18 ಎಸೆತಗಳಲ್ಲಿ 54 ರನ್ ಚಚ್ಚಿದರು. 20ನೇ ಓವರಿನ ಕೊನೆಯ ಎಸೆತವನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಸೂರ್ಯ ಶತಕ ಸಿಡಿಸಿದರು. ಸೂರ್ಯಕುಮಾರ್ ಯಾದವ್ 49 ಎಸೆತಗಳಲ್ಲಿ 103 ರನ್ ಸಿಡಿಸಿದರು.