ಬೆಂಗಳೂರು : ಸಾಮಾನ್ಯವಾಗಿ ಪಕ್ಷದಲ್ಲಿ ಹಿರಿಯರು, ಹೆಚ್ಚು ಬಾರಿ ಗೆದ್ದವರು, ವರ್ಚಸ್ಸು ಹೆಚ್ಚು ಇಟ್ಟುಕೊಂಡವರು, ಮುಂದಿನ ಬಾರಿ ಮತ್ತೆ ಗೆಲ್ಲುತ್ತಾರೆ ಎಂಬ ಭರವಸೆ ಇದ್ದವರು. ಒಟ್ಟಾರೆಯಾಗಿ ಗೆಲ್ಲುವ ಕುದರೆ, ಪಕ್ಷಕ್ಕೆ ದೊಡ್ಡ ಬಲ ಆಗಿರುವವರಿಗೆ ಸಚಿವ ಸ್ಥಾನಗಳು ಸಿಗುತ್ತವೆ. ಆದರೆ, ಸಿಎಂ ಬಸವರಾಜ ಬೊಮ್ಮಾಯಿ (Basavaraja Bommai) ಸಂಪುಟದ ಅನೇಕ ಸಚಿವರು (Minister) ಈ ಬಾರಿಯ ಚುನಾವಣೆಯಲ್ಲಿ ಸೋಲು ಕಂಡಿದ್ದು, ಜನಾಕ್ರೋಶದ ಬಗ್ಗೆ ಬಿಜೆಪಿ ಚಿಂತನೆ ನಡೆಸಿದೆ.
ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿದ್ದ ಹಲವು ಹಾಲಿ ಸಚಿವರು ಸೋಲುಂಡು ಬಿಜೆಪಿಗೆ ಶಾಕ್ ನೀಡಿದ್ದಾರೆ. ಮುಧೋಳ ಕ್ಷೇತ್ರದಲ್ಲಿ ಮಾಜಿ ಡಿಸಿಎಂ, ಸಚಿವ ಗೋವಿಂದ ಕಾರಜೋಳ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆರ್.ಬಿ. ತಿಮ್ಮಾಪುರ 70,478 ಮತಗಳನ್ನು ಪಡೆಯುವುದರ ಮೂಲಕ ಕಾರಜೋಳ ಅವರನ್ನು ಸೋಲಿಸಿದ್ದಾರೆ. ಕಾರಜೋಳ ಈ ಬಾರಿ 54,082 ಮತಗಳನ್ನು ಪಡೆದಿದ್ದು, 16396 ಅಂತರದಲ್ಲಿ ಕಾರಜೋಳ ಸೋಲು ಕಂಡಿದ್ದಾರೆ.
ಹಿರೇಕೆರೂರು ಕ್ಷೇತ್ರದಲ್ಲಿ ಬಿ.ಸಿ. ಪಾಟೀಲ್, ಹೊಸಕೋಟೆ ಕ್ಷೇತ್ರದ ಎಂಟಿಬಿ ನಾಗರಾಜ, ಚಾಮರಾಜನಗರ ಮತ್ತು ವರುಣಾ ಕ್ಷೇತ್ರದಲ್ಲಿ ವಿ.ಸೋಮಣ್ಣ, ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಜೆ.ಸಿ ಮಾಧುಸ್ವಾಮಿ, ಬೀಳಗಿ ಕ್ಷೇತ್ರದಿಂದ ಮುರುಗೇಶ್ ನಿರಾಣಿ, ಕನಕಪುರ ಕ್ಷೇತ್ರದಿಂದ ಆರ್.ಅಶೋಕ್ ಸೋತಿದ್ದಾರೆ. ಆರ್. ಅಶೋಕ್ ಕನಕಪುರದಿಂದ ಸೋತರೆ, ಪದ್ಮನಾಭನಗರ ಮತಕ್ಷೇತ್ರದಿಂದ ಗೆದ್ದಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿರುದ್ಧ ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದ ಪ್ರದೀಪ್ ಈಶ್ವರ್ ಭರ್ಜರಿಯಾಗಿ ಸಚಿವರನ್ನೇ ಸೋಲಿಸಿದ್ದಾರೆ. ಪ್ರದೀಪ್ ಅವರು 85,755 ಮತಗಳನ್ನು ಪಡೆದಿದ್ದರೆ, ಕೆ.ಸುಧಾಕರ್ 74068 ಮತಗಳನ್ನು ಪಡೆದು ಸೋಲು ಒಪ್ಪಿಕೊಂಡಿದ್ದಾರೆ.
ಕೆ.ಆರ್ ಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದ ನಾರಾಯಣಗೌಡ ಕೂಡ ಜೆಡಿಎಸ್ ಪಕ್ಷದ ಎಚ್.ಟಿ. ಮಂಜು ವಿರುದ್ಧ ಸೋಲು ಕಂಡಿದ್ದಾರೆ. ಮಂಜು ಅವರು 79,844 ಮತ ಪಡೆದು ಗೆಲುವಿನ ಪತಾಕಿ ಹಾರಿಸಿದರೆ, 57,939 ಮತಗಳನ್ನು ಪಡೆಯುವುದರ ಮೂಲಕ ದೇವರಾಜ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 37,793 ಮತಗಳನ್ನು ಕೊಡುವ ಮೂಲಕ ನಾರಾಯಣಗೌಡ ಅವರನ್ನು ಮೂರನೇ ಸ್ಥಾನಕ್ಕೆ ಮತದಾರ ತಳ್ಳಿದ್ದಾರೆ.
ಬಿಜೆಪಿ ಪಕ್ಷದ ಪ್ರಭಾವಿ ಸಚಿವರಾಗಿದ್ದ ಬಳ್ಳಾರಿ ಗ್ರಾಮಾಂತರ ಅಭ್ಯರ್ಥಿ ಬಿ.ಶ್ರೀರಾಮುಲು ಕೂಡ ಸೋಲುವ ಮೂಲಕ ಪಕ್ಷಕ್ಕೆ ಶಾಕ್ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ನಾಗೇಂದ್ರ 103030 ಮತಗಳನ್ನು ಪಡೆಯುವ ಮೂಲಕ ಸೋಲಿನ ರುಚಿ ಉಣಿಸಿದ್ದಾರೆ. ಶ್ರೀರಾಮುಲು 74031 ಮತಗಳನ್ನು ಪಡೆಯುವ ಮೂಲಕ ಸೋತಿದ್ದಾರೆ.
ಸಚಿವ ಹಾಲ್ಲಪ್ಪ ಆಚಾರ್ಯ ಅವರು ಯಲಬುರ್ಗ ಕ್ಷೇತ್ರದಿಂದ ಸ್ಪರ್ಧಿಸಿ, ಬಸವರಾಜ ರಾಯರೆಡ್ಡಿ ವಿರುದ್ಧ ಸೋಲು ಕಂಡಿದ್ದಾರೆ. ಈ ಬಾರಿ ಮತದಾರ ರಾಯರೆಡ್ಡಿಗೆ ಮಣೆ ಹಾಕಿದ್ದಾನೆ. ಬಸವರಾಜ ರಾಯರೆಡ್ಡಿ 92508 ಮತಗಳನ್ನು ಪಡೆದಿದ್ದರೆ, ಹಾಲಪ್ಪ 75461 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
ಇನ್ನು ಮುರುಗೇಶ ನಿರಾಣಿ ಕೂಡ ಬೀಳಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಜಿ.ಟಿ. ಪಾಟೀಲ್ ವಿರುದ್ಧ ಸೋಲು ಕಂಡಿದ್ದಾರೆ. ಬಿಜೆಪಿಯ ಹಿರಿಯ ನಾಯಕ ವಿ.ಸೋಮಣ್ಣ ಅವರು ಚಾಮರಾಜನಗರ ಹಾಗೂ ವರುಣಾ ಕ್ಷೇತ್ರಗಳೆರಡರಲ್ಲಿಯೂ ಸ್ಪರ್ಧೆ ಮಾಡಿದ್ದರು. ಹೈಕಮಾಂಡ್ ಇವರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸೋಲಿಸುವ ಹೊಣೆ ನೀಡಿತ್ತು. ಆದರೆ, ಸೋಮಣ್ಣ ಅವರು ಎರಡೂ ಕ್ಷೇತ್ರಗಳಲ್ಲಿ ಸೋಲು ಕಂಡು ಮುಖ ಭಂಗ ಅನುಭವಿಸಿದ್ದಾರೆ. ಜಿ. ಮಾಧುಸ್ವಾಮಿ ಕೂಡ ಜನರ ವಿರೋಧಕ್ಕೆ ಸಿಲುಕಿ, ಸೋಲು ಅನುಭವಿಸಿದ್ದಾರೆ. ಎಂಟಿಬಿ ನಾಗರಾಜು ಮತ್ತೊಮ್ಮೆ ಹೊಸಕೋಟೆಯಲ್ಲಿ ಸೋಲು ಕಂಡಿದ್ದಾರೆ. ಶರತ್ ಬಚ್ಚೇಗೌಡ ಅವರ ವಿರುದ್ಧ ಎಂಟಿಬಿ ನಾಗರಾಜ್ ಸೋಲು ಅನುಭವಿಸಿದ್ದಾರೆ. ಶಿಕ್ಷಣ ಸಚಿವರಾಗಿದ್ದ ಬಿ.ಸಿ. ನಾಗೇಶ್ ಕೂಡ ಸೋಲು ಅನುಭವಿಸಿದ್ದಾರೆ. ಘಟಾನುಘಟಿ ನಾಯಕರೇ ಸೋಲಿನ ಕದ ತಟ್ಟಿದ್ದರಿಂದಾಗಿ ಬಿಜೆಪಿ ಪಕ್ಷಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದೇ ಹೇಳಬಹುದು.