ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಧು ಬಂಗಾರಪ್ಪ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಸತತ 7 ಬಾರಿ ಶಾಸಕರಾಗಿ ಎಸ್. ಬಂಗಾರಪ್ಪ ಗೆದ್ದಿದ್ದ ಕ್ಷೇತ್ರದಲ್ಲಿ ಅವರಿಬ್ಬರ ಮಕ್ಕಳ ಮಧ್ಯೆ ಕಿತ್ತಾಟ ನಡೆದಿತ್ತು. ಸದ್ಯ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ ಗೆಲುವು ಸಾಧಿಸಿದ್ದಾರೆ. 1994ರ ವರೆಗೆ ಸತತ ಏಳು ಬಾರಿ ಈ ಕ್ಷೇತ್ರದಲ್ಲಿ ಎಸ್ ಬಂಗಾರಪ್ಪ ಗೆಲುವು ಸಾಧಿಸಿದ್ದರು. 2008ರಲ್ಲಿ ಒಮ್ಮೆ ಬಂಗಾರಪ್ಪ ಕುಟುಂಬದ ಹೊರತಾಗಿ ಹಾಲಪ್ಪ ಈ ಕ್ಷೇತ್ರದ ಶಾಸಕರಾಗಿದ್ದರು.
ಸದ್ಯ ಈ ಕ್ಷೇತ್ರವು ಬಂಗಾರಪ್ಪ ಕುಟುಂಬದ ಕೈಯಲ್ಲಿಯೇ ಇದೆ. ಮೂರನೇ ಬಾರಿಗೆ ಅಣ್ಣ, ತಮ್ಮ ಪರಸ್ಪರ ಹೋರಾಟಕ್ಕೆ ನಿಂತಿದ್ದಾರೆ. ಈ ಹಿಂದಿನ ಅಣ್ಣ-ತಮ್ಮಂದಿರ ನಡುವಿನ ಎರಡೂ ಚುನಾವಣೆಯಲ್ಲಿ ಕುಮಾರ ಬಂಗಾರಪ್ಪ ಗೆಲುವು ಸಾಧಿಸಿದ್ದರು. ಈಗಾಗಲೇ ಮೂರು ಬಾರಿ ಸೊರಬದಲ್ಲಿ ಕುಮಾರ್ ಬಂಗಾರಪ್ಪ ಗೆಲುವು ಸಾಧಿಸಿದ್ದಾರೆ. ಕಳೆದ ಬಾರಿ ಸುಮಾರು 13 ಸಾವಿರ ಮತಗಳಿಂದ ಕುಮಾರ ಬಂಗಾರಪ್ಪ ಗೆಲುವು ಸಾಧಿಸಿದ್ದರೆ, 2004ರಲ್ಲಿ ಸುಮಾರು 12 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು. ಜೆಡಿಎಸ್ ನಿಂದ ಬಿ. ಚಂದ್ರೇಗೌಡ ಹಾಗೂ ಆಪ್ ನಿಂದ ಚಂದ್ರಶೇಖರ್ ಕಣದಲ್ಲಿದ್ದರು. ಮಧು ಬಂಗಾರಪ್ಪ ಪರ ಈ ಬಾರಿ ನಟ ಶಿವಣ್ಣ ಹಾಗೂ ಅವರ ಪತ್ನಿ ಪ್ರಚಾರ ನಡೆಸಿದ್ದರು.