Bangalore : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಕಂಡಿದ್ದು, ಸದ್ಯ ಅಲ್ಲಿ ಸರ್ಕಾರ ರಚನೆಯ ಚಿಂತನೆ ನಡೆದಿದೆ. ಹೀಗಾಗಿ ಯಾರು ಸಿಎಂ ಆಗುತ್ತಾರೆ ಎಂಬ ಚರ್ಚೆಗಳು ಶುರುವಾಗಿವೆ. ಅಲ್ಲದೇ, ಸಿಎಂ ಆಗುವುದಕ್ಕಾಗಿಯೇ ಕಾಂಗ್ರೆಸ್ ಪಾಳಯದಲ್ಲಿ ಹಲವರು ಪೈಪೋಟಿ ನಡೆಸುತ್ತಿದ್ದಾರೆ.
ಈಗಾಗಲೇ ಸಿಎಂ ರೇಸ್ ನಲ್ಲಿ ಇಬ್ಬರಂತೂ ಇರುವುದು ಎಲ್ಲರಿಗೂ ತಿಳಿದ ವಿಷಯವೇ. ಹಲವು ದಿನಗಳಿಂದಲೂ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಿಎಂ ಕುರ್ಚಿಯ ಮೇಲೆ ಕಣ್ಣು ಇಟ್ಟಿದ್ದರು. ಇಬ್ಬರ ಮಧ್ಯೆ ಸಿಎಂ ಸ್ಥಾನಕ್ಕಾಗಿ ಫೈಟ್ ಇದ್ದರೂ ಚುನಾವಣೆ ಸಂದರ್ಭದಲ್ಲಿ ಇಬ್ಬರೂ ಯಾವುದೇ ಸಣ್ಣ ಮುನಿಸು ತೋರಿಸದೆ, ಪಕ್ಷ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೀಗಾಗಿ ಪಕ್ಷಕ್ಕೆ ಯಾವುದೇ ಡ್ಯಾಮೇಜ್ ಕೂಡ ಆಗದೆ, ಪಕ್ಷ ಭರ್ಜರಿ ಜಯ ಸಾಧಿಸುವಂತೆ ಮಾಡಿತು.
ಸದ್ಯ ಪಕ್ಷದ ಜಯದ ಆಧಾರದ ಮೇಲೆ ಇಬ್ಬರೂ ಸಿಎಂ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದಾರೆ. ಸದ್ಯ ಇಬ್ಬರಲ್ಲಿ ಒಬ್ಬರು ತ್ಯಾಗ ಮಾಡಬೇಕಿದೆ. ಅಲ್ಲದೇ, ಇಬ್ಬರನ್ನೂ ಸಮಾಧಾನ ಮಾಡಲು ಹೈಕಮಾಂಡ್ 50:50ರ ಸೂತ್ರವನ್ನು ಕೂಡ ಮುಂದಿಡಬಹುದು ಎನ್ನಲಾಗುತ್ತಿದ್ದರೂ ಯಾರು ಮೊದಲಿಗೆ ಎಂಬ ಪ್ರಶ್ನೆ ಉದ್ಭವವಾಗುತ್ತಿದೆ. ಇದರೊಂದಿಗೆ ಲಿಂಗಾಯತ ಕೋಟಾದಲ್ಲಿ ಎಂ.ಬಿ. ಪಾಟೀಲ್, ಹಿರಿಯ ರಾಜಕಾರಣಿಗಳಾದ ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ್ ಕೂಡ ರೇಸ್ ನಲ್ಲಿದ್ದಾರೆ. ಇನ್ನೂ ದಲಿತ ಸಿಎಂ ಕೂಗಿನಲ್ಲಿ ಪ್ರಿಯಾಂಕ್ ಖರ್ಗೆ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಹೆಸರು ಮುಂಚೂಣಿಯಲ್ಲಿವೆ. ಆದರೆ, ಹೈಕಮಾಂಡ್ ಯಾರ ಹೆಸರನ್ನು ಯಾವ ಆಧಾರದ ಮೇಲೆ ಘೋಷಣೆ ಮಾಡುತ್ತದೆ ಎಂಬುವುದು ಇಂದೇ ಅಂತ್ಯವಾಗುವ ಸಾಧ್ಯತೆ ಇದೆ.