Davanagere : ಕರ್ನಾಟಕ ವಿಧಾನಸಭಾ ಚುನಾವಣೆ(Karnataka Assembly Election) ಯಲ್ಲಿ ಸೋಲು ಅನುಭವಿಸಿದ ಬಿಜೆಪಿಯ ಎಂ.ಪಿ. ರೇಣುಕಾಚಾರ್ಯ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆ. ಕೋವಿಡ್ ಸಂದರ್ಭದಲ್ಲಿಯಂತೂ ಜೀವದ ಹಂಗು ತೊರೆದು ಜನರ ಸೇವೆ ಮಾಡಿದ್ದೆ. ಆದರೂ ಜನರು ನನ್ನನ್ನು ಸೋಲಿಸಿದರು. ಹೀಗಾಗಿ ನಾನು ಇನ್ನು ಮುಂದೆ ರಾಜಕೀಯವನ್ನೇ ಬಿಡುತ್ತೇನೆ. ರಾಜಕೀಯದಿಂದ ನಿವೃತ್ತಿ ಪಡೆದು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಚುನಾವಣೆಗೆ (Election) ಇನ್ನು ಮುಂದೆ ಬರುವುದಿಲ್ಲ ಎಂದು ಹೇಳಿದ್ದಾರೆ.
ರೇಣುಕಾಚಾರ್ಯ ಅವರು ನಿನ್ನೆ ನಡೆದ ಮತದಾನದ ವೇಳೆ ಒಂದೇ ಒಂದು ಸುತ್ತಿನಲ್ಲಿಯೂ ಮುನ್ನಡೆ ಸಾಧಿಸಿರಲಿಲ್ಲ. ಹೀಗಾಗಿಯೇ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಕ್ಷೇತ್ರದ ಜನರಿಗೆ ಹಗಲಿರುಳು ಕೆಲಸ ಮಾಡಿದೆ. ಆದರೂ ಈ ರೀತಿ ಸೋಲು ಆಯ್ತಲ್ಲ ಅಂತ ನೋವಿನಿಂದ ಕಣ್ಣೀರು ಸುರಿಸಿದ್ದಾರೆ. ಸೋಲಿನ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಅವರಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಅವರ ನಿವಾಸಕ್ಕೆ ಜಮಾಯಿಸಿದ್ದರು. ಎಲ್ಲ ಕಾರ್ಯಕರ್ತರ ಎದುರೇ ಅವರು ನಿವೃತ್ತಿ ಕುರಿತು ಮಾತನಾಡಿದ್ದಾರೆ.