ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಬಹುಮತ ಗಳಿಸಿದ್ದು, ಸಿಎಂ ಹಾಗೂ ಡಿಸಿಎಂ ಕಸರತ್ತು ನಡೆಯುತ್ತಿದೆ.
ಈಗಾಗಲೇ ಸಿಎ ರೇಸ್ ನಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ (DK Shivakumar) ಹೆಸರಿದ್ದು, ಸದ್ಯ ಈ ಪಟ್ಟಿಗೆ ಡಾ. ಜಿ ಪರಮೇಶ್ವರ್ (Dr.G.Parameshwar), ಎಂ.ಬಿ. ಪಾಟೀಲ್ (MB Patil) ಸೇರಿದ್ದಾರೆ. ಅಲ್ಲದೇ, ಇನ್ನೂ ಕೆಲವು ಹಿರಿಯ ನಾಯಕರು ಈ ರೇಸ್ ನಲ್ಲಿದ್ದಾರೆ. ಹೀಗಾಗಿ ಈ ಪಟ್ಟಿ ಕ್ಷಣ ಕ್ಷಣಕ್ಕೂ ಬೆಳೆಯುತ್ತ ಸಾಗುತ್ತಿದೆ. ಇದರ ಮಧ್ಯೆ ಈಗ ಜಾತಿಯ ಆಧಾರದ ಮೇಲೆ ಡಿಸಿಎಂ ಸ್ಥಾನಗಳು ಓಡುತ್ತಿವೆ.
ಒಕ್ಕಲಿಗ ಸಮುದಾಯದವರು ಡಿ.ಕೆ. ಶಿವಕುಮಾರ್ ಸಿಎಂ ಆಗಲಿ ಎಂದು ಒತ್ತಾಯಿಸಿ ಬೃಹತ್ ರ್ಯಾಲಿ ಆಯೋಜಿಸಲು ಒಕ್ಕಲಿಗ ಸಮುದಾಯ ನಿರ್ಧರಿಸಿದೆ. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಬೆಂಬಲಿಗರು ಬಲವಾಗಿ ಒತ್ತಾಯಿಸುತ್ತಿದ್ದಾರೆ. ಈ ನಡುವೆ ಸಿದ್ದರಾಮಯ್ಯ ದೆಹಲಿಯಲ್ಲಿದ್ದು, ಸಂಜೆ ಡಿ.ಕೆ. ಶಿವಕುಮಾರ್ ಕೂಡ ದೆಹಲಿಗೆ ತೆರಳುತ್ತಿದ್ದಾರೆ. ಹೀಗಾಗಿ ಹೈಕಮಾಂಡ್ ಸಂಪೂರ್ಣವಾಗಿ ಗೊಂದಲಕ್ಕೆ ಇಳಿಯುವಂತಾಗಿದೆ. 9 ಮುಸ್ಲಿಂ ಶಾಸಕರಲ್ಲಿ ಒಬ್ಬರಿಗೆ ಉಪಮುಖ್ಯಮಂತ್ರಿ ಹುದ್ದೆ ಮತ್ತು ಐವರಿಗೆ ಮಂತ್ರಿ ಪಟ್ಟ ನೀಡುವಂತೆ ಮುಸ್ಲಿಂ ಸಮುದಾಯದವರು ಬೇಡಿಕೆ ಮುಂದಿಟ್ಟಿದ್ದಾರೆ. ಲಿಂಗಾಯತ ಸಮುದಾಯದ ವಿನಯ್ ಕುಲಕರ್ಣಿ, ಈಶ್ವರ್ ಖಂಡ್ರೆ ಅವರನ್ನು ಡಿಸಿಎಂ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ.