ವಿರೋಧದ ಮಧ್ಯೆಯೂ ಭರ್ಜರಿ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ (The Kerala Story) ಸಂಭ್ರಮದ ಮಧ್ಯೆ ಆಘಾತ ಎದುರಾಗಿದೆ. ಚಿತ್ರದ ಸಕ್ಸಸ್ ನಲ್ಲಿದ್ದ ಚಿತ್ರತಂಡ ಪ್ರಯಾಣ ಮಾಡುತ್ತಿದ್ದು, ಈ ಸಂದರ್ಭದಲ್ಲಿ ರಸ್ತೆ ಅಪಘಾತವಾಗಿ ನಿರ್ದೇಶಕ ಸುದೀಪ್ರೋ ಸೇನ್ (Sudeepro Sen) ಹಾಗೂ ನಾಯಕಿ ಅದಾ ಶರ್ಮಾ(Adah Sharma) ಗಾಯಗೊಂಡಿದ್ದು, ಆಸ್ಪತ್ರೆಗೆ (Hospital)ದಾಖಲಾಗಿದ್ದಾರೆ.
ಮುಂಬಯಿನ ಖಾಸಗಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ನಿರ್ದೇಶಕ ಹಾಗೂ ನಟಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಅಪಘಾತವನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದ್ದು, ನಾನಾ ಗೊಂದಲಗಳನ್ನು ಮೂಡಿಸಿದೆ. ಇದೊಂದು ಪೂರ್ವ ನಿಯೋಜಿತ ಅಪಘಾತ ಎಂದು ಕೆಲವರು ಗಾಳಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದಕ್ಕೆ ಸ್ವತಃ ನಿರ್ದೇಶಕರೇ ಬ್ರೇಕ್ ನೀಡಿದ್ದಾರೆ. ಗಾಬರಿ ಪಡುವಂಥದ್ದು ಏನೂ ಆಗಿಲ್ಲ. ನಾವೆಲ್ಲರೂ ಚೆನ್ನಾಗಿದ್ದೇವೆ. ನಿಮ್ಮ ಕಾಳಜಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ನಿರ್ದೇಶಕರು ಹೇಳಿದ ಮಾತಿಗೂ, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗೂ ಹೊಂದಾಣಿಕೆ ಆಗದೇ ಇರುವ ಕಾರಣದಿಂದಾಗಿ ಇನ್ನೂ ಅಭಿಮಾನಿಗಳು ಆತಂಕದಲ್ಲೇ ಇದ್ದಾರೆ.