ಚಿಕ್ಕಬಳ್ಳಾಪುರ : ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election Results 2023) ಚಿಕ್ಕಬಳ್ಳಾಪುರದಲ್ಲಿ(Chikkaballapura) ಬಿಜೆಪಿಯಿಂದ ಸ್ಪರ್ಧಿಸಿದ್ದ ಡಾ.ಕೆ ಸುಧಾಕರ್(Dr K Sudhakar) ಅವರು ಸೋತಿದ್ದಕ್ಕೆ ನೊಂದ ಅಂಧ ಅಭಿಮಾನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ಘಟನೆ ತಾಲ್ಲೂಕಿನ ವಡ್ರೆಪಾಳ್ಯದಲ್ಲಿ ನಡೆದಿದ್ದು, ಚಿತ್ತಾರ ವೆಂಕಟೇಶ್ ಮನನೊಂದು ಕೆರೆಗೆ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ವ್ಯಕ್ತಿ ಎನ್ನಲಾಗಿದೆ. ಕೋಟೆ ನಿವಾಸಿ ವೆಂಕಟೇಶ ಅವರು ಸುಧಾಕರ್ ಅವರ ಅಭಿಮಾನಿಯಾಗಿದ್ದರು. ಆದರೆ, ಸುಧಾಕರ್ ಸೋತ ಹಿನ್ನೆಲೆಯಲ್ಲಿ ತೀವ್ರವಾಗಿ ಮನನೊಂದಿದ್ದರು. ನೋವು ತಡೆಯಲಾಗದೆ ಕೆರೆಗೆ ಹಾರಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ್ದ ಸುಧಾಕರ್, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ ವಿರುದ್ಧ 10,642 ಮತಗಳ ಅಂತರದಿಂದ ಸೋಲು ಕಂಡಿದ್ದರು. ಪ್ರದೀಪ್ ಈಶ್ವರ್ ಅಬ್ಬರದ ಭಾಷಣ ಮಾಡುವ ಮೂಲಕ ಸಿನಿಮಾ ಡೈಲಾಗ್ ಹೊಡೆದು ಜನರ ಮನ ಗೆದ್ದಿದ್ದಾರೆ. ಈ ಫಲಿತಾಂಶ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇನ್ನೊಂದೆಡೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಸಾರಾ ಮಹೇಶ (Sa Ra Mahesh) ಅವರು ಕೂಡ ಸೋತಿದ್ದಕ್ಕೆ ಮನನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಮೈಸೂರು ಜಿಲ್ಲೆಯ ಕೆಆರ್ ನಗರ (KR Nagar) ತಾಲೂಕಿನ ದಮ್ಮನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ವೆಂಕಟೇಶ್ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.