Davanagere : ಬಿಜೆಪಿ ಸರ್ಕಾರದ ತಪ್ಪು ನಿರ್ಧಾರಗಳು ಹಾಗೂ ಮೀಸಲಾತಿ ಗೊಂದಲದಿಂದಾಗಿ ಬಿಜೆಪಿಗೆ ದೊಡ್ಡ ಪೆಟ್ಟು ಬೀಳುವಂತಾಯಿತು ಎದು ಹೊನ್ನಾಳಿ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಹೇಳಿದ್ದಾರೆ.
ದಾವಣಗೆರೆ (Davanagere) ಜಿಲ್ಲೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಈಗ ನಾವೆಲ್ಲ ಬಿಜೆಪಿ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸೋಲೇ ಗೆಲುವಿನ ಮೆಟ್ಟಿಲು. ಕಾಂಗ್ರೆಸ್ (Congress Manifesto) ಹಸಿಸುಳ್ಳು ಹೇಳಿ, ಸುಳ್ಳು ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಯಾವ ರೀತಿ ಸರ್ಕಾರ ನಡೆಸುತ್ತದೆ ಎಂಬುವುದನ್ನು ನೋಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಪ್ಪು ನಿರ್ಧಾರಗಳು ಹಾಗೂ ಮೀಸಲಾತಿ ಗೊಂದಲದಿಂದಾಗಿ ನಮಗೆ ದೊಡ್ಡಪೆಟ್ಟು ಬಿದ್ದಿದೆ. ಕಾಂಗ್ರೆಸ್ ನವರು ಗ್ಯಾರಂಟಿಗಳನ್ನು ಎರಡು ತಿಂಗಳ ಮುಂಚೆಯೇ ಜನರ ಮುಂದೆ ಇಟ್ಟರು. ಹೀಗಾಗಿ ನಮ್ಮ ಪ್ರಣಾಳಿಕೆ ಉತ್ತಮವಾಗಿದ್ದರೂ ಸೋಲು ಕಾಣಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ (BS Yediyurappa), ಈಶ್ವರಪ್ಪ (KS Eshwarappa), ಜಗದೀಶ್ ಶೆಟ್ಟರ್ (Jagadeesh Shettar) ಅವರನ್ನು ಕಡೆಗಣಿಸಿದ್ದಾರೆಂದು ತಪ್ಪು ಸಂದೇಶ ರವಾನಿಸಿ ಅದನ್ನು ಮತಗಳಾಗಿ ಪರುವರ್ತನೆ ಮಾಡಿಕೊಂಡಿದ್ದಾರೆ. ಸೋಲಿನ ಬಗ್ಗೆ ಯಾರನ್ನೂ ದೂಷಿಸುವುದಿಲ್ಲ. ಅವಳಿ ತಾಲೂಕಿನ ಜನರು 75 ಸಾವಿರ ಮತ ಹಾಕಿದ್ದು, ನಾನು ಅವರಿಗೆ ಚಿರಋಣಿಯಾಗಿದ್ದೇನೆ ಎಂದು ಹೇಳಿದ್ದಾರೆ.