NewDelhi : ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಆದರೂ ಸಿಎಂ ಅಭ್ಯರ್ಥಿ ಆ ಪಕ್ಷದಲ್ಲಿ ಕಗ್ಗಂಟಾಗಿಯೇ ಮುಂದುವರೆದಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮಧ್ಯೆ ಬಿಗ್ ಫೈಟ್ ಏರ್ಪಟ್ಟಿದೆ. ಹೀಗಾಗಿ ಸಿಎಂ ಆಯ್ಕೆಯ ವಿಚಾರ ದೆಹಲಿಗೆ ಶಿಫ್ಟ್ ಆಗಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಈ ಸಮಸ್ಯೆ ಬಗೆ ಹರಿಸಬೇಕಿದೆ. ಹೀಗಾಗಿ ಇಡೀ ಕರ್ನಾಟಕದ ಚಿತ್ತ ಈಗ ದೆಹಲಿಯತ್ತ ನೆಟ್ಟಿದೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ನಿನ್ನೆಯೇ ದೆಹಲಿಯತ್ತ ತೆರಳಬೇಕಿದ್ದ ಡಿಕೆಶಿ, ಇಂದು ಫ್ಲೈಟ್ ಹತ್ತುತ್ತಿದ್ದಾರೆ. ಇದನ್ನು ಗಮನಿಸಿದರೆ, ಇಂದು ಸಿಎಂ ಆಯ್ಕೆಯ ಘೋಷಣೆಯಾಗಬಹುದು ಎನ್ನಲಾಗುತ್ತಿದೆ.
ಶಿಮ್ಲಾದಿಂದ ಸೋನಿಯಾ ಗಾಂಧಿ ಆಗಮಿಸುವ ವೇಳೆಗೆ ಡಿಕೆಶಿ ದೆಹಲಿ ತಲುಪುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದಿಂದ ವರದಿ ತೆಗೆದುಕೊಂಡು ಹೋಗಿರುವ ಎಐಸಿಸಿ ವೀಕ್ಷಕರು ದೆಹಲಿಯಲ್ಲಿ ಖರ್ಗೆ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್, ಎಐಸಿಸಿ ವೀಕ್ಷಕರಾದ ಜಿತೇಂದ್ರ ಸಿಂಗ್, ಬಬಾರಿಯಾ ಸೇರಿ ಇತರರು ಭಾಗಿಯಾಗಿದ್ದರು.
ಖರ್ಗೆ ನಿವಾಸದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ್ದಾರೆ. ಆದರೆ, ಸದ್ಯದ ಮಾಹಿತಿಯಂತೆ ಸಿದ್ದರಾಮಯ್ಯಗೆ ಸಿಎಂ ಸ್ಥಾನ ನೀಡಲು ರಾಹುಲ್ ಗಾಂಧಿ ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಶಾಸಕರು, ಸಮುದಾಯಗಳ ಬೆಂಬಲ ಆಧರಿಸಿ ರಾಹುಲ್ ಸಿದ್ದರಾಮಯ್ಯ ಪರ ಒಲವು ತೋರಿದ್ದಾರೆ ಎನ್ನಲಾಗಿದೆ.