Yadagiri : ಯಾದಗಿರಿಯಲ್ಲಿ ದ್ವೇಷ ರಾಜಕಾರಣ ಬೆಳಕಿಗೆ ಬಂದಿದೆ.
ಸ್ನೇಹಿತರೊಂದಿಗೆ ಊಟಕ್ಕೆ ತೆರಳಿದ್ದ ಬಿಜೆಪಿ ಕಾರ್ಯಕರ್ತನನ್ನು ಹೋಟೆಲ್ ಕೆಲಸಗಾರನೇ ಹತ್ಯೆ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಅಲ್ಲದೇ, ಜಗಳ ಬಿಡಿಸಲು ಹೋದ ವ್ಯಕ್ತಿ ಶ್ರೀನಿವಾಸನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಠನೆ ನಡೆದಿದೆ. ಘಟನೆ ಖಂಡಿಸಿ ಬಿಜೆಪಿ (BJP) ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆಯೂ ನಡೆದಿದೆ.
ಸೋಮವಾರ ರಾತ್ರಿ ಯಾದಗಿರಿ (Yadagiri) ನಗರದ ರಾಯಲ್ ಗಾರ್ಡನ್ ಗೆ ಬಿಜೆಪಿ ಕಾರ್ಯಕರ್ತ ಶ್ರೀನಿವಾಸ ಹಾಗೂ ಸ್ನೇಹಿತರು ಊಟಕ್ಕೆಂದು ತೆರಳಿದ್ದರು. ಊಟ ಮುಗಿಸಿ ಮರಳಿ ಬರಬೇಕು ಎನ್ನುವಷ್ಟರಲ್ಲಿ ಪಾರ್ಕಿಂಗ್ ಮಾಡಿದ್ದ ಕಾರು ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ ಸ್ನೇಹಿತರ ಜೊತೆ ರಾಯಲ್ ಗಾರ್ಡನ್ ಹೋಟೆಲ್ ಮಾಲೀಕರ ಜಗಳ ಆರಂಭವಾಗಿದೆ. ಶ್ರೀನಿವಾಸ ಜಗಳ ಬಿಡಿಸಲು ಹೋಗಿದ್ದಾನೆ. ಈ ಸಂದರ್ಭದಲ್ಲಿ ಮಹಮದ್ ಅನಾಸ್ ಹಾಗೂ ನಾಲ್ಕೈದು ಜನ ಏಕಾಏಕೀ ಬಂದು ಚಾಕುವಿನಿಂದ ಶ್ರೀನಿವಾಸನ ಹೊಟ್ಟೆಗೆ ಇರಿದಿದ್ದಾರೆ. ಶ್ರೀನಿವಾಸ ಸ್ಥಳದಲ್ಲೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಕೊಲೆಯಾದ ವ್ಯಕ್ತಿ, ಗಾಂಧಿ ವೃತ್ತದ ಸಮೀಪದ ಮನೆ ಮುಂಭಾಗದಲ್ಲಿ ಹೋಟೆಲ್ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಶ್ರೀನಿವಾಸನ ಪತ್ನಿ ಹಾಗೂ ಮಕ್ಕಳಿಬ್ಬರು ರಜೆ ನಿಮಿತ್ತ ಊರಿಗೆ ಹೋಗಿದ್ದರು. ಹೀಗಾಗಿ ಹೋಟೆಲ್ಗೆ ಊಟಕ್ಕೆ ತೆರಳಿ ಜಗಳ ಬಿಡಿಸಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. ತನ್ನ ಕಾರ್ಯಕರ್ತ ಅನ್ಯಕೋಮಿನವರಿಂದ ಕೊಲೆಯಾಗಿದ್ದಕ್ಕೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು ರೊಚ್ಚಿಗೆದ್ದು ಪ್ರತಿಭಟನೆಗಿಳಿದಿದ್ದಾರೆ. ಬಿಜೆಪಿ ಕಾರ್ಯಕರ್ತ ಶ್ರೀನಿವಾಸನನ್ನು ಕೊಲೆ ಮಾಡಿರುವವರಿಗೆ ಗಲ್ಲು ಶಿಕ್ಷೆ ನೀಡಬೇಕು. ಮೃತ ಕುಟುಂಬಸ್ಥರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.