Bangalore : ರಾಜ್ಯದ ಮತದಾರರು ಕಾಂಗ್ರೆಸ್ ಗೆ ಪೂರ್ಣ ಬಹುಮತ ನೀಡಿ ಐದು ದಿನಗಳೇ ಕಳೆದಿವೆ. ಆದರೆ, ಇಲ್ಲಿಯವರೆಗೆ ನೂತನ ಸರ್ಕಾರ ಮಾತ್ರ ಅಸ್ತಿತ್ವಕ್ಕೆ ಬರುತ್ತಿಲ್ಲ. ಪಕ್ಷ ಅಧಿಕಾರಕ್ಕೆ ಬರೋವರೆಗೂ ಇದ್ದ ನಾಯಕರಲ್ಲಿದ್ದ ಒಗ್ಗಟ್ಟು, ಈಗ ಮುಖ್ಯಮಂತ್ರಿ ಆಯ್ಕೆಯ ವಿಚಾರದಲ್ಲಿ ಕಾಣುತ್ತಲೇ ಇಲ್ಲ.
4 ದಿನ ಕಳೆದರೂ ಸಿಎಂ ಆಯ್ಕೆಗೆ ಕಸರತ್ತು ನಡೆಯುತ್ತಲೇ ಇದೆ. ಪ್ರಭಲ ನಾಯಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಲ್ಲಿ ಒಮ್ಮತ ಮೂಡಿಸುವಲ್ಲಿ ಹೈಕಮಾಂಡ್ ನಾಯಕರು ಸಫಲರಾಗಿಲ್ಲ. ಒಂದು ಹಂತದಲ್ಲಿ ಸಿದ್ದರಾಮಯ್ಯ ಸಿಎಂ, ಡಿಕೆ ಶಿವಕುಮಾರ್ ಡಿಸಿಎಂ ಎಂಬ ಸುದ್ದಿ ಹಬ್ಬಿತ್ತು. ಹೈಕಮಾಂಡ್ ಅಧಿಕೃತವಾಗಿ ತನ್ನ ಘೋಷಣೆ ಪ್ರಕಟಿಸುವ ಮುನ್ನವೇ ರಾಜ್ಯದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು, ಬೆಂಬಲಿಗರು ವಿಜಯೋತ್ಸವ ಆಚರಿಸಿದ್ದರು. ಆದರೆ ಹೈಕಮಾಂಡ್‌ನ ಈ ಸೂತ್ರಕ್ಕೆ ಡಿಕೆಶಿ ಒಪ್ಪಿಗೆ ಸೂಚಿಸದ ಹಿನ್ನೆಲೆಯಲ್ಲಿ ಮತ್ತೆ ವಿವಾದ ತಾರಕಕ್ಕೆ ಏರಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಳಿಕ ರಾಹುಲ್ ಗಾಂಧಿ ಕೂಡ, ಡಿಕೆ ಶಿವಕುಮಾರ್ ಮನವೊಲಿಸುವಲ್ಲಿ ವಿಫಲರಾದರು. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಮೇಲಿಂದ ಮೇಲೆ ಸಭೆಗಳನ್ನು ನಡೆಸಿದರೂ ಪ್ರಯೋಜನವಾಗಲಿಲ್ಲ. ಶಿಮ್ಲಾದಿಂದ ಪ್ರಿಯಾಂಕಾ ಗಾಂಧಿ ಕರೆ ಮಾಡಿದರೂ ಡಿಕೆ ಶಿವಕುಮಾರ್ ಮಾತ್ರ ಪಟ್ಟದ ವಿಚಾರದಲ್ಲಿ ತಮ್ಮ ನಿಲುವು ಬದಲಿಸಲಿಲ್ಲ. ಇಬ್ಬರು ನಾಯಕರು ಒಂದು ಕಡೆ ಸಭೆಯಲ್ಲಿ ಪಾಲ್ಗೊಳ್ಳಲು ಒಪ್ಪಿಗೆ ಕೂಡ ಸೂಚಿಸಲಿಲ್ಲ.