Bangalore : ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದ ನಂತರ, ಸಿಎ ಕುರ್ಚಿಗಾಗಿ ಕಾದಾಟ ನಡೆದಿತ್ತು. ಸದ್ಯ ಆ ಸಮಸ್ಯೆ ಕೂಡ ಮುಕ್ತಾಯವಾಗಿದ್ದು, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಆಯ್ಕೆಯಾಗಿದ್ದಾರೆ. ಸದ್ಯ ಇಬ್ಬರು ನಾಯಕರು, ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಗ್ರ್ಯಾಂಡ್ ಆಗಿ ಬರಮಾಡಿಕೊಂಡಿದ್ದಾರೆ.
ಇಂದು ಸಂಜೆ 7 ಗಂಟೆ ಸುಮಾರಿಗೆ ಹೆಚ್‍ಎಎಲ್ ವಿಮಾನ ನಿಲ್ದಾಣ (HAL Airport) ಕ್ಕೆ ಬಂದಿಳಿದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನು ಅಭೂತಪೂರ್ವವಾಗಿ ಸ್ವಾಗತಿಸಲಾಯಿತು. ನಂತರ ಕಾರಿನಲ್ಲಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ನಂತರ ಸಿದ್ದರಾಮಯ್ಯ ಅವರು ನೇರವಾಗಿ ತಮ್ಮ ಕುಮಾರಕೃಪಾ ನಿವಾಸಕ್ಕೆ ತೆರಳಿದರು. ರಸ್ತೆಯುದ್ದಕ್ಕೂ ಅಭಿಮಾನಿಗಳು ಹೂವಿನ ಸುರಿಮಳೆಗೈದರು.
ಕುಮಾರಕೃಪಾದಿಂದ ನೇರವಾಗಿ ಕೆಪಿಸಿಸಿ (KPCC Office) ಕಚೇರಿಗೆ ತೆರಳಲಿರುವ ಸಿದ್ದರಾಮಯ್ಯ ನಂತರ ಇಂದಿರಾ ಭವನದಲ್ಲಿ ನಡೆಯುವ ಸಿಎಲ್‍ಪಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಿದ್ದರಾಮಯ್ಯ ನಿವಾಸದಲ್ಲಿ ಅದಾಗಲೇ ಆಗಮಿಸಿರುವ ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ. ಸಿದ್ದರಾಮಯ್ಯ ಪರ ಘೋಷಣೆ ನಿವಾಸದ ಮುಂದೆ ಮುಗಿಲುಮುಟ್ಟಿದೆ. ನಂತರ ಕಾಂಗ್ರೆಸ್ ಶಾಸಕಾಂಗ ಸಭೆ (CLP Meeting) ಯಲ್ಲಿ ಕೆಲವು ನಿರ್ಣಯಗಳು ನಡೆಯಲಿವೆ. ಬಹುಮತ ಪಡೆದ ನಂತರ ಎರಡನೇ ಶಾಸಕಾಂಗ ಸಭೆ ಇದಾಗಿದ್ದು, ಶಾಸಕಾಂಗ ಸಭೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ವೀಕ್ಷಕರು ಹಾಜರಾಗಲಿದ್ದಾರೆ. ರಾಜ್ಯ ಉಸ್ತುವಾರಿಯಿಂದ ಎಐಸಿಸಿಯಲ್ಲಿ ನಡೆದ ನಿರ್ಣಯದ ಪ್ರಸ್ತಾಪ ಆಗಲಿದೆ. ಎಐಸಿಸಿ ಅಧ್ಯಕ್ಷರು ಸಿಎಂ ಹಾಗೂ ಡಿಸಿಎಂ ಆಗಿ ಆಯ್ಕೆ ಮಾಡಿರುವ ವಿಚಾರ ಪ್ರಸ್ತಾಪಿಸಲಾಗುತ್ತದೆ.
ಎಐಸಿಸಿ ನಿರ್ಣಯಕ್ಕೆ ಇಂದಿನ ಶಾಸಕಾಂಗ ಸಭೆಯಲ್ಲಿ ಎಲ್ಲ ಶಾಸಕರ ಅನುಮೋದನೆ ನೀಡಲಾಗುತ್ತದೆ. ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಲು ಶಾಸಕಾಂಗ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಹಕ್ಕು ಮಂಡನೆ ನಿರ್ಣಯಕ್ಕೆ ಎಲ್ಲ ಶಾಸಕರು ಲಿಖಿತ ಸಹಿ ಹಾಕಲಿದ್ದಾರೆ. ನೂತನ ಸಿಎಲ್ಪಿ ನಾಯಕನ ಆಯ್ಕೆ ಪತ್ರ ಸಿದ್ದಪಡಿಸಲಾಗುತ್ತದೆ. ಸಿಎಲ್‍ಪಿ ನಿರ್ಣಯದೊಂದಿಗೆ ಹೋಗಿ ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ನೇತೃತ್ವದಲ್ಲಿ ರಾಜ್ಯಪಾಲರ ಭೇಟಿಯಾಗಲಿದ್ದಾರೆ. ರಾಜ್ಯಪಾಲರ ಮುಂದೆ ಸರ್ಕಾರ ರಚನೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಅವಕಾಶ ನೀಡುವಂತೆ ಮನವಿ ಮಾಡಲಾಗುತ್ತದೆ.