NewDelhi : ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ (DK Shivakumar) ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎಐಸಿಸಿ (AICC) ಅಧಿಕೃತವಾಗಿ ಹೇಳಿದೆ.
ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣ್‌ದೀಪ್ ಸುರ್ಜೇವಾಲಾ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದೇ ಡಿಸಿಎಂ ಹುದ್ದೆ ಸರ್ಕಾರದಲ್ಲಿ ಇರಲಿದೆ. ಮುಂದಿನ ಲೋಕಸಭಾ ಚುನಾವಣೆ ನಡೆಯುವರೆಗೂ ಡಿಕೆ ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಎಷ್ಟು ಸಮಯದವರೆಗೆ ಸಿದ್ದರಾಮಯ್ಯ ಸಿಎಂ ಆಗಿ ಅಧಿಕಾರದಲ್ಲಿ ಇರಲಿದ್ದಾರೆ ಎಂಬ ಪ್ರಶ್ನೆಗೆ ಯಾವುದೇ ಉತ್ತರ ನೀಡಲಿಲ್ಲ. ಕರ್ನಾಟಕ ಜನರ ಸೇವೆ ಮಾಡಲು ಕಾಂಗ್ರೆಸ್ ಬದ್ಧವಾಗಿದೆ. 5 ಗ್ಯಾರಂಟಿಗಳನ್ನು ಸರ್ಕಾರ ಈಡೇರಿಸಲಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಲ್ಡೋಜರ್ ಕೆಳಗೆ ಹಾಕಿ ಹೂತು ಹಾಕುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಇದು ಪ್ರತಿಯೊಬ್ಬ ಕನ್ನಡಿಗನ ಜಯ. ಇಬ್ಬರಲ್ಲಿಯೂ ಸರ್ಕಾರ ನಿಭಾಯಿಸುವ ಶಕ್ತಿ ಇದೆ. ಇದೇ ರೀತಿ ಹಲವು ನಾಯಕರಲ್ಲೂ ಶಕ್ತಿ ಇದೆ. ಆದರೆ ಒಬ್ಬರನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಸರ್ಕಾರದಲ್ಲಿ ಒಬ್ಬರಿಗೆ ಮಾತ್ರ ಡಿಸಿಎಂ ನೀಡಲಾಗುತ್ತದೆ. ಸಚಿವ ಸ್ಥಾನದಲ್ಲಿ ಎಲ್ಲ ಸಮುದಾಯದವರಿಗೂ ಪ್ರಾತಿನಿಧ್ಯ ಸಿಗಲಿದೆ ಎಂದು ಹೇಳಿದ್ದಾರೆ.