Shimla : ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಗೆಲುವು ಸಾಧಿಸುವ ಮೂಲಕ ಅದರ ಪ್ಲೇ ಆಫ್ ಆಸೆಯನ್ನು ಕಮರಿಸಿದೆ. ರಿಲೀ ರೆಸ್ಸೋ, ಪೃಥ್ವಿ ಶಾ ಸ್ಫೋಟಕ ಅರ್ಧ ಶತಕ ಹಾಗೂ ಇಶಾಂತ್ ಶರ್ಮಾ ಮತ್ತು ನಾರ್ಟ್ಜೆ ಬಿಗಿ ಬೌಲಿಂಗ್ ದಾಳಿ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಜಯ ಸಾಧಿಸಿದೆ.

ಮೊದಲಪ ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 213 ರನ್ ಗಳ ಬೃಹತ್ ಮೊತ್ತ ಸೇರಿಸಿತ್ತು. ಆ ನಂತರ ಧವನ್ ಪಡೆಯನ್ನು 8 ವಿಕೆಟ್ ಪಡೆದು 198 ರನ್ ಗಳನ್ನು ಗಳಿಸಲು ಅವಕಾಶ ನೀಡಿ ಗೆಲುವಿನ ನಗೆ ಬೀರಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಾರ್ನರ್ ಪಡೆ ಉತ್ತಮ ಬ್ಯಾಟಿಂಗ್ ಮಾಡಿತು. ಆರಂಭಿಕರಾಗಿ ಫೀಲ್ಡಿಗಿಳಿದ ಡೇವಿಡ್ ವಾರ್ನರ್ ಮತ್ತು ಪೃಥ್ವಿ ಶಾ ಉತ್ತಮ ಪ್ರದರ್ಶನ ತೋರಿದರು. ಈ ಜೋಡಿ ಮೊದಲ ವಿಕೆಟ್ ಗೆ 94 ರನ್ ಜೊತೆಯಾಟವಾಡಿ ತಂಡಕ್ಕೆ ನೆರವಾದರು. ಡೆಲ್ಲಿ ಪರ ರಿಲೀ ರೆಸ್ಸೊ 82 ರನ್ ಸಿಡಿಸಿ ಔಟಾಗದೇ ಉಳಿದರು. ಪೃಥ್ವಿ ಶಾ 54, ಫಿಲಿಪ್ ಸಾಲ್ಟ್ ಔಟಾಗದೇ 26 ರನ್ ಗಳಿಸಿದರು. ಪಂಜಾಬ್ ಕಿಂಗ್ಸ್ ಪರ ಸ್ಯಾಮ್ ಕರನ್ ಎರಡು ವಿಕೆಟ್ ಪಡೆದರು.

214 ರನ್ ಗುರಿ ಬೆನ್ನತ್ತಿ ಫೀಲ್ಡಿಗಿಳಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 198 ರನ್ ಗಳನ್ನು ಮಾತ್ರ ಗಳಿಸಿತು. ಶಿಖರ್ ಧವನ್ 10ನೇ ಬಾರಿಗೆ ಡಕ್ ಆಗಿದ್ದಾರೆ. ಪ್ರಭಾಸಿಮ್ರಾನ್ ಮತ್ತು ಅಥರ್ವ ಟೈಡೆ ತಂಡಕ್ಕೆ ಕೊಂಚ ಚೇತರಿಕೆ ನೀಡಿದರು. 22 ರನ್ ಗಳಿಸಿ ಪ್ರಭಾಸಿಮ್ರಾನ್ ಸಿಂಗ್ ಕೂಡ ಔಟಾದರು. ಟೈಡೆ 55 ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ಲಿಯಾಮ್ ಲಿವಿಂಗ್‌ಸ್ಟೋನ್ 94 ಸಿಡಿಸಿದರೂ ಗೆಲುವಿಗೆ ದಡ ಸೇರಲು ವಿಫಲರಾದರು. ಇಶಾಂತ್ ಶರ್ಮಾ 2, ಅನ್ರಿಚ್ ನಾರ್ಟ್ಜೆ 2 ವಿಕೆಟ್ ಕಿತ್ತರು. ಪ್ಲೇ ಆಫ್ ಸೇರಲು ಉಳಿದಿದ್ದ ಕ್ಷೀಣ ಅವಕಾಶವನ್ನು ಜೀವಂತವಾಗಿರಿಸಲು ಪಂಜಾಬ್ ತಂಡ ಕಾತರವಾಗಿತ್ತು. ಆದರೆ ಹೀನಾಯ ಸೋಲನುಭವಿಸಿದ ಪಂಜಾಬ್‌ನ ಪ್ಲೇ ಆಫ್ ಭಗ್ನಗೊಂಡಿದೆ.