Bangalore : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನಿರೀಕ್ಷೆ ಮೀರಿ ಗೆಲುವು ಸಾಧಿಸಿದೆ. ಮ್ಯಾಜಿಕ್ ನಂಬರ್ ದಾಟಿ, ದೂರ ಸಾಗಿದೆ. ಹೀಗಾಗಿ ಬಹುಮತದ ಸರ್ಕಾರ ರಚಿಸಲು ಮುಂದಾಗಿದ್ದು, ಸಿಎಂ ಹಾಗೂ ಡಿಸಿಎಂ ಆಯ್ಕೆಯ ಕಗ್ಗಂಟು ಕೂಡ ಮುಗಿದಿದೆ. ಸಿಎಂ ಆಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆಶಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ನಿಯೋಜಿತ ಸಿಎಂ ಹೊಸ ಕಾರು ಖರೀದಿಸಿದ್ದಾರೆ.
ಮುಖ್ಯಮಂತ್ರಿ ಪಟ್ಟ ಸಿಗುತ್ತಿದ್ದಂತೆ ಬರೋಬ್ಬರಿ ಒಂದು ಕೋಟಿ ರೂಪಾಯಿ ಟೋಯೋಟಾ ವೆಲ್‌ಫೈರ್ ಕಾರನ್ನು ಸಿದ್ದರಾಮಯ್ಯ ಖರೀದಿಸಿದ್ದಾರೆ. ವೆಲ್‌ಫೈರ್ ಕಾರು ಅಂದ್ರೆ ಪ್ರತಿಷ್ಠೆ ಹಾಗೂ ಅತ್ಯಂತ ಜನಪ್ರಿಯ ಕಾರಾಗಿದೆ. ಸೆಲೆಬ್ರೆಟಿಗಳು, ಉದ್ಯಮಿಗಳು, ರಾಜಕಾರಣಿಗಳು ಹೆಚ್ಚಾಗಿ ಈ ಕಾರನ್ನು ಖರೀದಿಸಿದ್ದಾರೆ. ಈ ಟೋಯೋಟಾ ವೆಲ್‌ಫೈರ್ ನ ಬೆಲೆ ಬರೋಬ್ಬರಿ 96.55 ಲಕ್ಷ ರೂ. ವಿಮೆ, ರಿಜಿಸ್ಟ್ರೇಶನ್ ಸೇರಿದಂತೆ ಆನ್ ರೋಡ್ ಬೆಲೆ ಸರಿ ಸುಮಾರು 1.20 ಕೋಟಿ ರೂಪಾಯಿ ಆಗಲಿದೆ.
ಈ ನೂತನ ಟೋಯೋಟಾ ವೆಲ್‌ಫೈರ್ ಕಾರು ಸರ್ಕಾರದ ಕಾರಲ್ಲ. ಈ ಕಾರನ್ನು ಸಿದ್ದರಾಮಯ್ಯ ಖರೀದಿಸಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಎರಡನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವ ಸಿದ್ದರಾಮಯ್ಯನವರಿಗೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸರ್ಕಾರಿ ಕಾರು ಸಿಗಲಿದೆ. ಆದರೆ, ತಮ್ಮ ದೂರ ಪ್ರಯಾಣದ ಅನುಕೂಲತೆ, ಆರೋಗ್ಯ ದೃಷ್ಟಿಯಿಂದ ಟೋಯೋಟಾ ವೆಲ್‌ಫೈರ್ ಕಾರನ್ನು ಖರೀದಿಸಿದ್ದಾರೆ ಎನ್ನಲಾಗಿದೆ.