ಕೊಚ್ಚಿ : ಕೇರಳದ ಸಾರಿಗೆ ಬಸ್ ನಲ್ಲಿ ಮಲಯಾಳಂ ನಟಿ ಹಾಗೂ ಮಾಡೆಲ್ ಗೆ ಯುವಕನೊಬ್ಬ ಖಾಸಗಿ ಅಂಗ ಪ್ರದರ್ಶಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಸದ್ಯ ಈ ಆರೋಪದ ಹಿನ್ನೆಲೆಯಲ್ಲಿ 27 ವರ್ಷದ ಯುವಕನೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸಾವದ್ ಎಂದು ಗುರುತಿಸಲಾಗಿದ್ದು, ಕೋಯಿಕ್ಕೊಡ್ನ ಕಯಾಕೋಡಿ ನಿವಾಸಿ ಎನ್ನಲಾಗಿದೆ. ಬಸ್ನಿಂದ ಇಳಿದು ತಪ್ಪಿಸಿಕೊಂಡು ಓಡುವಾಗ ಸ್ಥಳೀಯರು ಮತ್ತು ಬಸ್ ಸಿಬ್ಬಂದಿ ಬೆನ್ನಟ್ಟಿ ಹೋಗಿ ಸೆರೆಹಿಡಿದಿದ್ದಾರೆ. ತ್ರಿಸ್ಸೂರು ಮೂಲದ ನಟಿ ನಂದಿತಾ ಶಂಕರ ಬಸ್ನಲ್ಲಿ ನಡೆದ ಘಟನೆಯನ್ನು ವಿಡಿಯೋ ಮೂಲಕ ವಿವರಿಸಿದ್ದು, ಅನೇಕರು ನಂದಿತಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ತಮಗಾದ ಅದೇ ರೀತಿಯ ಘಟನೆಗಳನ್ನು ಹಂಚಿಕೊಂಡಿದ್ದಾರೆ. ನಂದಿತಾ ಸಿನಿಮಾ ಶೂಟಿಂಗ್ ಗಾಗಿ ಎರ್ನಾಕುಲಂಗೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅಂಗಮಾಲಿ ಹತ್ತಿರ ಆರೋಪಿಯು ಬಸ್ ಹತ್ತಿದ್ದಾನೆ. ಆನಂತರ ಇಬ್ಬರು ಮಹಿಳೆಯರ ಮಧ್ಯೆ ಬಂದು ಕುಳಿತುಕೊಂಡಿದ್ದಾನ. ಆ ಇಬ್ಬರು ಮಹಿಳೆಯರಲ್ಲಿ ನಂದಿತಾ ಅವರು ಕೂಡ ಒಬ್ಬರು. ಬಸ್ ಹೊರಡಲು ಆರಂಭಿಸಿದಾಗ ನಂದಿತಾ ಅವರನ್ನು ಸ್ಪರ್ಶಿಸಲು ಆರಂಭಿಸಿದ್ದಾನೆ ಎನ್ನಲಾಗಿದೆ.
ಈ ಕುರಿತು ಮಾತನಾಡಿರುವ ನಂದಿತಾ, ನಾನು ಕಿಟಕಿ ಪಕ್ಕದಲ್ಲಿ ಕುಳಿತಿದ್ದೆ. ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದ. ಎಲ್ಲದಕ್ಕೂ ನಾನು ಉತ್ತರಿಸಿದೆ. ನೋಡಲು ಆತ ಒಳ್ಳೆಯವನಂತೆ ಕಾಣುತ್ತಿದ್ದ. ಬಸ್ ಕೆಲ ದೂರ ಸಾಗಿದ ಕೂಡಲೇ ಆತನ ಕೈ ನನ್ನ ದೇಹವನ್ನು ಸ್ಪರ್ಶಿಸುತ್ತಿರುವಂತೆ ಭಾಸವಾಯಿತು. ನಾನು ಆತನ ಕಡೆ ನೋಡಿದಾಗ ಆತನ ಒಂದು ಕೈ ಆತನ ಖಾಸಗಿ ಅಂಗದ ಮೇಲಿರುವುದನ್ನು ಗಮನಿಸಿದೆ. ಇದರಿಂದ ನನಗೆ ತೀವ್ರ ಮುಜುಗರವಾಯಿತು. ಬಸ್ನ ಕಿಟಕಿ ಗಾಜನ್ನು ಮೇಲಕ್ಕೇರಿಸಿ ಆತನಿಂದ ಅಂತರ ಕಾಯ್ದುಕೊಂಡೆ. ಆತ ಮತ್ತೆ ತನ್ನ ದುಷ್ಕೃತ್ಯ ಮುಂದುವರಿಸಿದ್ದ. ಮತ್ತೆ ನೋಡುವಷ್ಟರಲ್ಲಿ ತನ್ನ ಪ್ಯಾಂಟ್ ಜಿಪ್ ತೆರೆದು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಏನು ಮಾಡಬೇಕೆಂದು ತೋಚಲಿಲ್ಲ. ಬಳಿಕ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಏನು ನಿನ್ನ ಸಮಸ್ಯೆ ಎಂದು ಆತನನ್ನು ಪ್ರಶ್ನೆ ಮಾಡಿದೆ.
ಪ್ರಶ್ನೆ ಕೇಳುತ್ತಿದ್ದಂತೆಯೇ ಆತ ಪ್ಯಾಂಟ್ ಜಿಪ್ ಅನ್ನು ಹಾಕಿಕೊಂಡ. ನಾನು ನನ್ನ ಧ್ವನಿಯನ್ನು ಜೋರು ಮಾಡಿದೆ. ಈ ಸಂದರ್ಭದಲ್ಲಿ ಬಸ್ ಸಿಬ್ಬಂದಿ ನನ್ನ ಬಳಿ ಬಂದರು. ದೂರು ನೀಡುತ್ತೀರಾ ಎಂದು ಬಸ್ ಕಂಡಕ್ಟರ್ ಪ್ರಶ್ನಿಸಿದರು. ನಾನು ಹೌದು ಎಂದೆ. ಈ ವೇಳೆ ಆರೋಪಿ ತನ್ನ ಪ್ಯಾಂಟ್ ಜಿಪ್ ಓಪನ್ ಆಗಿಲ್ಲ ಎಂದು ವಾದಿಸಿದ. ಬಸ್ ವಿಮಾನ ನಿಲ್ದಾಣದ ಹತ್ತಿರ ನಿಲ್ಲುತ್ತಿದ್ದಂತೆ ಮತ್ತು ಬಸ್ನ ಬಾಗಿಲು ತೆರೆಯುತ್ತಿದ್ದಂತೆ ಓಡಿ ಹೋದ. ಕಂಡಕ್ಟರ್ ಮತ್ತು ಡ್ರೈವರ್ ಸ್ಥಳೀಯರ ನೆರವಿನಿಂದ ಆತನನ್ನು ಹಿಡಿದರು ಎಂದು ಹೇಳಿದ್ದಾರೆ.