ನೂತನವಾಗಿ ನಿರ್ಮಾಣಗೊಂಡಿರುವ ಸಂಸತ್ ಭವನವನ್ನು (Parliament Building) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೇ 28ರಂದು ಉದ್ಘಾಟಿಸಲಿದ್ದಾರೆ ಎಂದು ಲೋಕಸಭೆ ಸಚಿವಾಲಯ ಹೇಳಿದೆ.
ಸದ್ಯ ನೂತನವಾಗಿ ನಿರ್ಮಾಣಗೊಂಡಿರುವ ಈ ಲೋಕಸಭೆಯ ಕಟ್ಟಡ ಸುಮಾರು 543 ಸದಸ್ಯರಿಗೆ ಹಾಗೂ ರಾಜ್ಯಸಭೆ ಕಟ್ಟಡದಲ್ಲಿ 250 ಸದಸ್ಯರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಒಟ್ಟಾರೆ ಈ ಸಂಸತ್ ನಲ್ಲಿ ಭವನದಲ್ಲಿ 888 ಸದಸ್ಯರು ಕುಳಿತುಕೊಳ್ಳಬಹುದಾಗಿದೆ.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ನೂತನ ಸಂಸತ್ ಭವನ ಉದ್ಘಾಟಿಸುವಂತೆ ಆಹ್ವಾನ ನೀಡಿದ್ದಾರೆ. ಸದ್ಯ ಇರುವ ಸಂಸತ್ತಿನ ಕಟ್ಟಡ 1927ರಲ್ಲಿ ನಿರ್ಮಿಸಲಾಗಿದ್ದು, ಸುಮಾರು 100 ವರ್ಷಗಳಷ್ಟು ಹಳೆಯದಾಗಿದೆ. ಉಭಯ ಸದನಗಳಲ್ಲಿ ಸಂಸದರಿಗೆ ಕುಳಿತುಕೊಳ್ಳಲು ಅನುಕೂಲಕರವಾದ ವ್ಯವಸ್ಥೆಯೂ ಇಲ್ಲದಿರುವ ಕಾರಣ ಸದ್ಯ ಅಗತ್ಯತೆಗಳ ಪ್ರಕಾರ ಹೊಸ ಸಂಸತ್ ಭವನವನ್ನು ನಿರ್ಮಿಸಲಾಗಿದೆ.
ಡಿಸೆಂಬರ್ 2020 ರಲ್ಲಿ ಹೊಸ ಸಂಸತ್ ಕಟ್ಟಡ ನಿರ್ಮಾಣ ಕಾಮಗಾರಿಗೆ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಿದ್ದರು. ಸರ್ಕಾರ ಕಳೆದ ವರ್ಷದ ನವೆಂಬರ್ ಒಳಗಡೆ ಕಾಮಗಾರಿ ಮುಕ್ತಾಯಗೊಳಿಸುವ ಗುರಿಯನ್ನು ನಿಗದಿ ಪಡಿಸಿತ್ತು. ಆದರೆ ಕೊರೊನಾ ಸೇರಿದಂತೆ ಇನ್ನಿತರ ಸಮಸ್ಯೆಗಳಿಂದಾಗಿ ಡೆಡ್‌ಲೈನ್ ವಿಸ್ತರಣೆಯಾಗಿ ಈಗ ಉದ್ಘಾಟನೆಯ ಹಂತಕ್ಕೆ ಬಂದಿದೆ.