Kornersite

Bengaluru Just In Karnataka Kornotorial Politics State

Siddaramaiah: ರಾಜ್ಯದಲ್ಲಿ ನಾಳೆಯಿಂದ ಪ್ರಭಾವಿ ಅಹಿಂದ ನಾಯಕನ ಆಡಳಿತ ಆರಂಭ!

ವಿಧಾನಸಭೆಯಲ್ಲಿ ಸಿದ್ದು ಗುದ್ದು ಕೊಟ್ಟರೆ, ವಿರೋಧಿಗಳಲ್ಲಿ ನಡುಕ…ಸಿದ್ದು ಗುಡುಗಿದರೆ, ಅದು ಘರ್ಜನೆ ಇದ್ದಂತೆಯೇ ಸರಿ ಎಂದು ಆಗಾಗ ಹಲವು ನಾಯಕರು ಮಾತನಾಡುತ್ತಿರುವುದು ನಮಗೆ ತಿಳಿದ ಸಂಗತಿಯೇ ಸರಿ….ಈ ಅಹಿಂದ ನಾಯಕ ಮತ್ತೊಮ್ಮೆ ರಾಜ್ಯದ ಸಾರಥಿಯಾಗುತ್ತಿದ್ದು, ಕನ್ನಡಗಿರು ಸಂಪನ್ನಗೊಂಡಿದ್ದಾರೆ…

ನಿರೀಕ್ಷೆಯಂತೆ ಸಿಎಂ ಸ್ಥಾನಕ್ಕೆ ಟಗರು ಆಯ್ಕೆಯಾಗಿದೆ. ಟಗರು ಹಾಗೂ ಬಂಡೆಯ ನಡುವೆ ನಡೆಯುತ್ತಿದ್ದ ಕಾದಾಟದಲ್ಲಿ ಕೊನೆಗೂ ಟಗರು ಬಂಡೆಗೆ ಗುದ್ದಿ, ಸಿಎಂ ಕುರ್ಚಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಸಿದ್ದರಾಮಯ್ಯ ಎರಡನೇ ಬಾರಿಗೆ ರಾಜ್ಯದ ಸಿಎಂ ಆಗಿ ಅಧಿಕಾರ ಅನುಭವಿಸಲು ಮುಂದಾಗಿದ್ದಾರೆ. ಸಿಎಂ ಆಗಿ ಐದು ವರ್ಷಗಳ ಅವಧಿ ಪೂರೈಸಿದ್ದ ಕೆಲವೇ ಕೆಲವು ನಾಯಕರಲ್ಲಿ ಸಿದ್ದು ಕೂಡ ಒಬ್ಬರಾಗಿದ್ದರು. ಈಗ ಮತ್ತೊಂದು ಅವಧಿಗೆ ಸಿಎಂ ಆಗುತ್ತಿದ್ದು, ಕನ್ನಡಿಗರ ಮನ ಗೆದ್ದ ನಾಯಕರಾಗಿ ಮತ್ತೊಮ್ಮೆ ಹೊರ ಹೊಮ್ಮಿದ್ದಾರೆ.. ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಪ್ರಚಂಡ ಜಯದೊಂದಿಗೆ 135 ಸ್ಥಾನ ಗಳಿಸುವ ಮೂಲಕ ಅಧಿಕಾರದ ಗದ್ದುಗೆಯನ್ನೇ ನಿರಾಯಾಸವಾಗಿ ತಲುಪಿದೆ. ಫಲಿತಾಂಶ ಪ್ರಕಟವಾಗಿ ನಾಲ್ಕು ದಿನಗಳ ನಂತರ ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಹಾಗೂ ಕನಕಪುರದ ಬಂಡೆ ಡಿ.ಕೆ. ಶಿವಕುಮಾರ್ ಅವರನ್ನು ಮಾತ್ರ ಉಪ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡುವ ಮೂಲಕ ಬಿಕ್ಕಟ್ಟಿಗೆ ತೆರೆ ಎಳೆದಿದೆ. ಈ ಮೂಲಕ 2013ರಿಂದ 2018ರವರೆಗೆ ಪೂರ್ಣ ಪ್ರಮಾಣದಲ್ಲಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಸಿದ್ದು, ಮತ್ತೊಂದು ಇನ್ನಿಂಗ್ಸ್ ಗೆ ಮುಂದಾಗಿದ್ದಾರೆ.

ಮೈಸೂರಿನ ವರುಣಾ ಹೋಬಳಿಯ ಸಿದ್ದರಾಮನಹುಂಡಿಯಲ್ಲಿ 1948ರ ಆಗಸ್ಟ್‌ 12ರಂದು ತಂದೆ ಸಿದ್ದರಾಮೇಗೌಡ, ತಾಯಿ ಬೋರಮ್ಮ ದಂಪತಿಯ ಮಗನಾಗಿ, ಅವಿಭಕ್ತ ಕುಟುಂಬದಲ್ಲಿ ಜನಿಸಿರುವ ಸಿದ್ದರಾಮಯ್ಯ ಹುಟ್ಟು ಹೋರಾಟಗಾರ. ನಾಯಕ. ಬಡ ಕುಟುಂಬದಲ್ಲಿ ಜನಿಸಿದ್ದರು, ನಾಯಕತ್ವವನ್ನು ಉಸಿರಾಗಿಸಿಕೊಂಡವರು. ಚಿಕ್ಕಂದಿನಲ್ಲಿಯೇ ಜನರ ಮಧ್ಯೆ ಬೆಳೆದು ನಿಂತಿದ್ದ ಸಂಘ ಜೀವಿ. ಜಾನಪದ ನೃತ್ಯ, ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳಲ್ಲಿ ಆಸಕ್ತಿ ಹೊಂದಿದ್ದ ಇವರು, ಜನರೊಂದಿಗೆ ಬೆರೆಯುತ್ತ, ಜನರ ಸಮಸ್ಯೆಗಳನ್ನು ಚಿಕ್ಕಂದಿನಿಂದಲೇ ಕಣ್ಣಾರೆ ಕಂಡ ನಾಯಕ. 10ನೇ ವರ್ಷದವರೆಗೆ ಶಾಲೆಗೆ ಹೋಗದ ಸಿದ್ದರಾಮಯ್ಯ ನೇರವಾಗಿ 5ನೇ ತರಗತಿಗೆ ಪ್ರವೇಶ ಪಡೆದು, ವಿದ್ಯಾಭ್ಯಾಸ ಮುಂದುವರಿಸಿದ್ದರು. ಆದರೂ ವಿದ್ಯೆಯನ್ನು ಕರಗತ ಮಾಡಿಕೊಂಡ ಜಾಣ. ತಮ್ಮ ಹುಟ್ಟೂರಿನಲ್ಲಿಯೇ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಶಿಕ್ಷಣ ಪಡೆದಿದ್ದ ಸಿದ್ದರಾಮಯ್ಯ, ಮೈಸೂರಿನ ಯುವರಾಜ ಕಾಲೇಜಿನಲ್ಲಿ ಬಿಎಸ್ಸಿ ಓದಿದ ನಂತರ, ಮೈಸೂರು ವಿವಿಯಿಂದ ಕಾನೂನು ಪದವಿ ಪಡೆದಿದ್ದರು. ಎಲ್ ಎಲ್ ಬಿ ಮುಗಿಸಿದ ನಂತರ ಚಿಕ್ಕಬೋರಯ್ಯ ಎಂಬ ವಕೀಲರ ಹತ್ತಿರ, ವಕೀಲಿಕಿ ವೃತ್ತಿಯ ಆಲ, ಅಗಲ ತಿಳಿದುಕೊಂಡು, 1978ರವರೆಗೆ ಸ್ವಂತ ವಕೀಲಿ ವೃತ್ತಿ ಆರಂಭಿಸಿದ್ದರು.

ಆದರೆ, ಅವರ ತುಡಿತ ಮಾತ್ರ ಜನಸೇವೆಯನ್ನೇ ಕೈ ಬೀಸಿ ಕರೆಯುತ್ತಿತ್ತು. ಹೀಗಾಗಿಯೇ ಈ ನಾಯಕ, 1983ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಲೋಕದಳದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಜಯ ಸಾಧಿಸಿದ್ದರು. ನಂತರ ಲೋಕದಳದಿಂದ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾಗ, ನೂತನವಾಗಿ ರಚಿಸಿದ್ದ ಕನ್ನಡ ಕಾವಲು ಸಮಿತಿ ಅಧ್ಯಕ್ಷರನ್ನಾಗಿ ನೇಮಕಗೊಂಡಿದ್ದರು. ಮತ್ತೆ 1985ರ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವು ಪಡೆದು, ಪಶುಸಂಗೋಪನಾ ಸಚಿವರಾಗಿ ಅಧಿಕಾರ ಅನುಭವಿಸಿದರು. ನಂತರ ಸಂಪುಟ ಪುನರ್ ರಚನೆಯಾದರೂ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಈ ನಾಯಕ ಗೆದ್ದ ಸ್ಪರ್ಧಯಿಂದಲೇ ಅಧಿಕಾರ ಅನುಭವಿಸಿದರೂ ಸೋಲನ್ನು ಕಂಡಿದ್ದಾರೆ. ಸೋಲು – ಗೆಲುವಿನ ಅನುಭವ ಪಡೆದ ಇವರು, 1989ರಲ್ಲಿ ಕಾಂಗ್ರೆಸ್‌ ಅಲೆಯಿಂದ ಸೋಲು ಪರಾಜಿತಗೊಂಡಿದ್ದರು. ನಂತರ ಜನತಾ ಪಕ್ಷ ಇಬ್ಭಾಗವಾದ ಸಂದರ್ಭದಲ್ಲಿ ಸಿದ್ದರಾಮಯ್ಯ ಜನತಾದಳ ಸೇರಿಕೊಂಡಿದ್ದರು. 1992ರಲ್ಲಿ ದೇವೇಗೌಡರು ಸಮಾಜವಾದಿ ಪಕ್ಷದಿಂದ ಜನತಾದಳ ಸೇರಿದಾಗ, ಜನತಾದಳದ ಕಾರ್ಯದರ್ಶಿಯಾಗಿದ್ದರು. ಆ ನಂತರ 1994ರ ಚುನಾವಣೆಯಲ್ಲಿ ಗೆದ್ದು ಹಣಕಾಸು ಸಚಿವರಾದರು. 1999ರ ಚುನಾವಣೆ ವೇಳೆಯಲ್ಲಿ ಜನತಾದಳ 2 ಇಬ್ಭಾಗವಾದಾಗ, ದೇವೇಗೌಡರೊಂದಿಗೆ ಸೇರಿ ಜಾತ್ಯತೀ ಜನತಾದಳ ಪಕ್ಷದ ಅಧ್ಯಕ್ಷರೂ ಆದರು. 1999ರ ಚುನಾವಣೆಯಲ್ಲಿ ಮತ್ತೆ ಸಿದ್ದರಾಮಯ್ಯ ಅವರು ಸೋಲು ಕಂಡರು. ಆದರೂ ರಾಜ್ಯದಲ್ಲಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ರಾಜ್ಯದ ಉದ್ದಗಲಕ್ಕೂ ಸಂಚರಿಸಿದ್ದರು. ಅಲ್ಲದೇ, ಸೋತರೂ ಪಕ್ಷದಲ್ಲಿ ಮುಂಚೂಣಿಯ ನಾಯಕರಾಗಿಯೇ ಉಳಿದಿದ್ದರು. ಹೀಗಾಗಿಯೇ 2004ರಲ್ಲಿ ಜಾತ್ಯತೀತ ಜನತಾದಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿತರಾಗಿದ್ದರು. ಆದರೆ, ಆ ಸಂದರ್ಭದಲ್ಲಿ ಅಂದರೆ, 2004ರಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿತ್ತು. ಆಗ ಕಾಂಗ್ರೆಸ್‌ ಜತೆಗೂಡಿ ಸರ್ಕಾರ ರಚನೆಯಾದಾಗ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಇಂತಹ ನಾಯಕ ಮುಂದೆ ನಡೆದಿದ್ದೆಲ್ಲ ಸಾಧನೆ, ಜನರ ಅಚ್ಚು ಮೆಚ್ಚಿನ ನಾಯಕನಾಗಿ. ಕಾಂಗ್ರೆಸ್ ಸೇರುತ್ತಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಕೂಡ ಸಿದ್ದರಾಮಯ್ಯ ಪ್ರಬಲ ನಾಯಕರಾಗಿ ಬಿಟ್ಟರು. ಕಾಂಗ್ರೆಸ್ ನಲ್ಲಿ ಘಟಾನುಘಟಿ ನಾಯಕರಿದ್ದರೂ ಸಿದ್ದ ಪ್ರಬಲ ನಾಯಕಾರ ಸಾಲಿನಲ್ಲಿ ಮೊದಲಿಗರಾಗಿ ನಿಂತರು. ಆ ನಂತರ ಜೆಡಿಎಸ್ ನಲ್ಲಿ ಮುನಿಸಿಕೊಂಡು ಕಾಂಗ್ರೆಸ್ ಪಕ್ಷ ಸೇರಿದಾಗ 2008ರಲ್ಲಿ ನಡೆದ ವಿಧಾನಸಭೆಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಗೆಲುವು ಪಡೆದಿದ್ದರು. 2013ರಲ್ಲಿ ನಡೆದ ಚುನಾವಣೆಯಲ್ಲಿ ಸಿದ್ದು ನೇತೃತ್ವದಲ್ಲಿಯೇ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದ್ದು, ಆಗ ಸಿದ್ದು ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಈಗ ಮತ್ತೊಮ್ಮೆ ಸಿದ್ದು ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದು, ಮೇ 20ಕ್ಕೆ ತಮ್ಮ ಕಾರ್ಯಭಾರ ಆರಂಭಿಸಲಿದ್ದಾರೆ.

2013ರಲ್ಲಿ ಗೆಲುವು ಸಾಧಿಸಿ ಸಿಎಂ ಆಗುತ್ತಿದ್ದಂತೆ ಪ್ರತಿಯೊಬ್ಬ ಕನ್ನಡಿಗನಿಗೆ ಅನ್ನ ಬಾಗ್ಯ ಕರುಣಿಸಿದ ಸಿದ್ದರಾಮಯ್ಯ ಈಗ 5 ಗ್ಯಾರಂಟಿಗಳನ್ನು ಗ್ಯಾರಂಟಿಗೊಳಿಸಲು ಮುಂದಾಗಿದ್ದಾರೆ. 2013ರಲ್ಲಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದ ಸಿದ್ದು, ಈ ಬಾರಿಯೂ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದಾರೆ. ಅದರಂತೆ ಸಿದ್ದು ಅಧಿಕಾ ವಹಿಸಿಕೊಂಡು ಯಾವಾಗ ಗ್ಯಾರಂಟಿಗಳನ್ನು ಅನುಮೋದನೆ ಮಾಡುತ್ತಾರೆ ಎಂಬುವುದನ್ನೇ ಮತದಾರ ಕಾಯುತ್ತಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುತ್ತಿದ್ದು, ಜನರು ಮಾತ್ರ ನೆಮ್ಮದಿಯಿಂದ ಇರಲಿ ಎಂದು ಹಾರೈಸೋಣ….

You may also like

Politics

ಕಾಂಗ್ರೆಸ್ ಮೊದಲ ಪಟ್ಟಿ ಬಿಡುಗಡೆ ಬಗ್ಗೆ ಎಂ.ಬಿ. ಪಾಟೀಲ್ ಹೇಳಿದ್ದೇನು? ಯಾವಾಗ ಬಿಡುಗಡೆಯಾಗಲಿದೆ ಪಟ್ಟಿ?

ವಿಜಯಪುರ : ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುತ್ತಿವೆ. ಈಗಾಗಲೇ ಕಾಂಗ್ರೆಸ್ ನ ಮೊದಲ
Politics

ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಕೊಪ್ಪಳ : ತಂದೆ- ತಾಯಿ ಇಲ್ಲದ ಇಬ್ಬರು ಮಕ್ಕಳನ್ನು ಕೆಆರ್ ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದಿದ್ದಾರೆ.ಜಿಲ್ಲೆಯ ಗಂಗಾವತಿ ತಾಲೂಕಿನ ವೀರಾಪುರ ತಾಂಡಾದಲ್ಲಿ ಇಬ್ಬರು ಮಕ್ಕಳನ್ನು