ಬೆಳಗಾವಿ : ಹಲವು ವರ್ಷಗಳಿಂದಲೂ ಜಿಲ್ಲೆಯ ಗಡಿಯಲ್ಲಿ ಮಹಾರಾಷ್ಟ್ರದ ಎಂಇಎಸ್ ಎಂಇಎಸ್(MES) ಪುಂಡರು ಕಾಟ ನೀಡುತ್ತಲೇ ಬಂದಿದ್ದರು. ಹಲವು ಬಾರಿ ಎಂಇಎಸ್ ನ ಕೆಲವರು ಶಾಸಕರಾಗಿಯೂ ಆಯ್ಕೆಯಾಗಿದ್ದಾರೆ. ಆದರೆ, ಈ ಬಾರಿ ನಮ್ಮ ಕನ್ನಡಿಗರು ಮಾತ್ರ ಒಗ್ಗಟ್ಟು ಪ್ರದರ್ಶಿಸಿ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ.
ಈ ಬಾರಿ ಎಂಇಎಸ್, ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಖಾನಾಪುರ, ಯಮಕನಮರಡಿ, ನಿಪ್ಪಾಣಿಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಮರಾಠಿಗರು ಪ್ರಾಭಲ್ಯ ಇರುವ ಕ್ಷೇತ್ರದಲ್ಲಿ ಕೂಡ ಎಂಇಎಸ್ ಮಕಾಡೆ ಮಲಗಿರುವುದು ಈ ಬಾರಿಯ ವಿಶೇಷ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಎಂಇಎಸ್ ಅಭ್ಯರ್ಥಿ ಆರ್.ಎಂ.ಚೌಗುಲೆ, ಬೆಳಗಾವಿ ದಕ್ಷಿಣ ಕ್ಷೇತ್ರದ ಎಂಇಎಸ್ ಅಭ್ಯರ್ಥಿ ರಮಾಕಾಂತ ಕೊಂಡೂಸ್ಕರ್ ಹೆಚ್ಚಿನ ಪ್ರಚಾರ ನಡೆಸಿದ್ದರು. ಶಿವಸೇನೆ ಉದ್ಧವ್ ಠಾಕ್ರೆ ಬಣದ ವಕ್ತಾರ ಸಂಜಯ್ ರಾವುತ್ ಸೇರಿದಂತೆ ಹಲವಾರು ನಾಯಕರು ಆಗಮಿಸಿ, ಅಲ್ಲಿ ಪ್ರಚಾರ ನಡೆಸಿದ್ದರು. ಆದರೆ, ಕನ್ನಡಿಗರು ಮಾತ್ರ ತಕ್ಕ ಪಾಠ ಕಲಿಸಿದ್ದಾರೆ.