ತುಮಕೂರು : ನೂತನ ಸಚಿವ ಸಂಪುಟದಲ್ಲಿ ಡಾ. ಜಿ ಪರಮೇಶ್ವರ(G Parameshwara) ಅವರು ಅವಕಾಶ ಪಡೆದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಡಾ. ಜಿ.ಪರಮೇಶ್ವರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
1951 ಆಗಸ್ಟ್ 6ರಂದು ಜನಿಸಿರುವ ಪರಮೇಶ್ವರ್, ಪ್ರಾರಂಭಿಕ ವಿದ್ಯಾಭ್ಯಾಸದಿಂದ ಪಿಯುಸಿವರೆಗೆ ತಮ್ಮ ಸ್ವಂತ ಊರಿನಲ್ಲಿಯೇ ಓದುದ್ದಿದ್ದಾರೆ. ನಂತರ ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಕೃಷಿಯಲ್ಲಿ ಎಂಎಸ್ಸಿ ಪದವಿ ಮುಗಿಸಿ, ನಂತರ ಅದೇ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ. ಸಸ್ಯ ಶರೀರಶಾಸ್ತ್ರ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಕೆಲಸ ಮಾಡಿ, ನಂತರ, ಪರಮೇಶ್ವರ ಅವರು ವಿದೇಶಕ್ಕೆ ಹೋದರು. ಅಲ್ಲಿ ಸಸ್ಯ ಶರೀರಶಾಸ್ತ್ರದಲ್ಲಿ ಅಡಿಲೇಡ್ ವಿಶ್ವವಿದ್ಯಾಲಯದ ವೈಟ್ ಕೃಷಿ ಸಂಶೋಧನಾ ಕೇಂದ್ರದಿಂದ ಪಿಎಚ್‌ಡಿ ಪಡೆದಿದ್ದಾರೆ.
ಅವರು ಉತ್ತಮ ಕ್ರೀಡಾಪಟುವಾಗಿದ್ದು, ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ 100 ಮೀಟರ್ ರೇಸ್ 10.9 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ ದಾಖಲೆ ಹೊಂದಿದ್ದಾರೆ. ಅಂತರ್ ಕಾಲೇಜು, ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟಗಳಲ್ಲಿ ಕೃಷಿ ವಿಜ್ಞಾನ ಕೇಂದ್ರ ಕಾಲೇಜಿನ ಮೂಲಕ ರಾಷ್ಟ್ರಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಆಸ್ಟ್ರೇಲಿಯಾದಿಂದ ಮರಳಿದ ನಂತರ ಸಿದ್ಧಾರ್ಥ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಹಾವಿದ್ಯಾಲಯದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪರಮೇಶ್ವರ 1989ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. 1989ರಲ್ಲಿ ಮಧುಗಿರಿಯಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ದರು. 1993ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ರೇಷ್ಮೆ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. 1994ರಲ್ಲಿ ಎರಡನೇ ಬಾರಿಗೆ ಮಧುಗಿರಿಯಲ್ಲಿ ಸೋಲು ಕಂಡರು. ಮತ್ತೆ 1999, 2004ರ ಮಧುಗಿರಿಯಲ್ಲಿ ಗೆಲುವು ಸಾಧಿಸಿದ್ದಾರೆ. ಎಸ್.ಎಂ ಕೃಷ್ಣ ಸರ್ಕಾರದಲ್ಲಿ ಉತ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ ಶಿಕ್ಷಣ ಸಚಿವ, ಕಾರ್ಮಿಕ ಇಲಾಖೆ, ಸಣ್ಣ ನಿರಾವರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
2008ರಲ್ಲಿ ಜಿ. ಪರಮೇಶ್ವರ ಕ್ಷೇತ್ರ ಬದಲಾವಣೆ ಮಾಡಿ, 2008ರಲ್ಲಿ ಕೊರಟಗೆರೆಯಿಂದ ಸ್ಪರ್ಧೆ ಮಾಡಿ ಶಾಸಕರಾಗಿದ್ದರು. 2010ರಿಂದ 2018ರವರೆಗೂ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ ಮಾಡಿದರು. 2013ರಲ್ಲಿ ಕೊರಟಗೆರೆಯಿಂದ ಸ್ಪರ್ಧೆಮಾಡಿ ಸೋಲು ಕಂಡಿದ್ದರು. 2014ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹಸಚಿವರಾಗಿ ಕಾರ್ಯ ನಿರ್ವಹಿಸಿದರು. 2018ರಲ್ಲಿ ಕೊರಟಗೆರೆ ಕ್ಷೇತ್ರದಿಂದ ಆಯ್ಕೆಯಾದರು. ಆಗ ಸಮಿಶ್ರ ಸರ್ಕಾರದಲ್ಲಿ ಡಿ.ಸಿ.ಎಂ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೂಡ ಕಾರ್ಯ ಮಾಡಿದ ಅವರು ‘2023ರಲ್ಲಿ ಕೊರಟಗೆರೆಯಿಂದ ಸ್ಪರ್ಧೆ ಮಾಡಿ ಶಾಸಕರಾಗಿ ಆಯ್ಕೆಯಾಗಿದ್ದು, ಈ ಮೂಲಕ ಒಟ್ಟು 7ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ, 5ಬಾರಿ ಶಾಸಕರಾದ ಸಾಧನೆ ಮಾಡಿದ್ದಾರೆ. ಅಲ್ಲದೇ, ಡಿಸಿಎಂ ಸೇರಿದಂತೆ ಹಲವಾರು ಖಾತೆಗಳನ್ನು ಅವರು ನಿಭಾಯಿಸಿದ್ದಾರೆ.