Bangalore: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮೊದಲ ಕ್ಯಾಬಿನೆಟ್ ನಲ್ಲಿಯೇ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗೆ (Guarantee Scheme)ಗಳಿಗೆ ತಾತ್ವಿಕ ಒಪ್ಪಿಗೆ ಸಿಕ್ಕಿದ್ದು ಮುಂದಿನ ಕ್ಯಾಬಿನೆಟ್ (Cabinet) ನಂತರ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರಮಾಣ ವಚನ ಸ್ವೀಕರಿ, ಮೊದಲ ಕ್ಯಾಬಿನೆಟ್ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಮನೆಗಳಿಗೂ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತ ನೀಡುತ್ತೇವೆ. ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂ. ನೀಡುತ್ತೇವೆ. ಲಕ್ಷುರಿ ಬಸ್ ಗಳನ್ನು ಬಿಟ್ಟು, ಸರ್ಕಾರಿ ಬಸ್ಸಿನಲ್ಲಿ ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಬಸ್ ಪಾಸ್ ನೀಡಲಾಗುತ್ತದೆ. ಇದು ರಾಜ್ಯದ ಮಹಿಳೆಯರಿಗೆ ಮಾತ್ರ ಅನ್ವಯವಾಗುತ್ತದೆ. ಹೊರ ರಾಜ್ಯದ ಮಹಿಳೆಯರಿಗೆ ಅನ್ವಯವಾಗುವುದಿಲ್ಲ. ಎರಡು ವರ್ಷದವರೆಗೆ ತಿಂಗಳಿಗೆ ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ರೂ. ಭತ್ಯೆ, ಡಿಪ್ಲೋಮಾ ಪದವೀಧರರಿಗೆ ಪ್ರತಿ ತಿಂಗಳು 1,500 ರೂ.ಭತ್ಯೆ ನೀಡುತ್ತೇವೆ ಎಂದು ಘೋಷಿಸಿದ್ದಾರೆ.
ಮುಂದಿನ ವಾರವೇ ಎರಡನೇ ಕ್ಯಾಬಿನೆಟ್ ಸಭೆ ನಡೆಯಲಿದೆ. ಎಲ್ಲ ಸಚಿವಾಲಯದ ಜೊತೆ ಚರ್ಚೆ ನಡೆಸಿ ಆದೇಶ ಜಾರಿ ಮಾಡಲಾಗುವುದು. ಈ ಲೆಕ್ಕಾಚಾರದ ವಿವರಗಳನ್ನು ಮುಂದೆ ನೀಡಲಾಗುವುದು. ಜುಲೈ ನಲ್ಲಿ ಮತ್ತೆ ರಾಜ್ಯ ಬಜೆಟ್ ಮಂಡನೆಯಾಗಲಿದೆ ಎಂದು ಹೇಳಿದ್ದಾರೆ. ನಾವು ಘೋಷಿಸಿದ ಎಲ್ಲ ಗ್ಯಾರಂಟಿ ಯೋಜನೆ ಜಾರಿಗೆ 56 ಸಾವಿರ ಕೋಟಿ ರೂ. ಆಗಬಹುದು. ಸರ್ಕಾರದ ಬಜೆಟ್ 3.10 ಲಕ್ಷ ಕೋಟಿ ರೂ. ಇದೆ. 15 ಹಣಕಾಸು ಆಯೋಗದ ವರದಿ ಪ್ರಕಾರ ಕೇಂದ್ರದಿಂದ 50 ಸಾವಿರ ಕೋಟಿ ರೂ. ಅನುದಾನ ಬರುವ ಸಾಧ್ಯತೆಯಿದೆ. ಆದರೆ ಕರ್ನಾಟಕಕ್ಕೆ 1 ಲಕ್ಷ ಕೋಟಿ ರೂ. ಬರಬೇಕಿತ್ತು. ಕರ್ನಾಟಕದಿಂದ 4 ಲಕ್ಷ ಕೋಟಿ ರೂ. ತೆರಿಗೆ ರೂಪದಲ್ಲಿ ಹೋಗುತ್ತದೆ. ಕೇಂದ್ರದಿಂದ ನಮಗೆ ನಿರೀಕ್ಷಿತ ಪ್ರಮಾಣದಿಂದ ಅನುದಾನ ಬರುತ್ತಿರಲಿಲ್ಲ ಎಂದು ಗುಡುಗಿದ್ದಾರೆ.