Bangalore : ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ‘ಜೋಡೆತ್ತು’ ಸರ್ಕಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಿಎಂ ಆಗಿ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್ (DK Shivakumar) ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರೊಂದಿಗೆ 8 ಜನ ಶಾಸಕರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಚಿವ ಸ್ಥಾನ ಪಟ್ಟಿ ಅಂತಿಮಗೊಳಿಸುವುದಕ್ಕಾಗಿ ಮಧ್ಯರಾತ್ರಿ 2 ಗಂಟೆಯವರೆಗೂ ದೆಹಲಿಯಲ್ಲಿನ ಕೆ.ಸಿ. ವೇಣುಗೋಪಾಲ್ (K. C. Venugopal) ನಿವಾಸದಲ್ಲಿ ಸಭೆ ಮೇಲೆ ಸಭೆ ನಡೆದವು. ಪ್ರಮುಖ ಖಾತೆಗಳನ್ನು ತಮ್ಮ ಆಪ್ತ ಶಾಸಕರಿಗೆ ನೀಡುವಂತೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬೇಡಿಕೆ ಇಟ್ಟರು. ಹೀಗಾಗಿ ಸಚಿವ ಸ್ಥಾನ, ಖಾತೆ ವಿಚಾರವಾಗಿ ಒಮ್ಮತ ಮೂಡದ ಪರಿಣಾಮ ಕೇವಲ 8 ಜನ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಾಜಿ ಸಚಿವ ಟಿ.ಬಿ. ಜಯಚಂದ್ರ ಹಂಗಾಮಿ ಸ್ಪೀಕರ್ ಆಗಿ ನೇಮಕವಾಗುವ ಸಾಧ್ಯತೆಯಿದೆ. ಪರಮೇಶ್ವರ್, ಪ್ರಿಯಾಂಕ ಖರ್ಗೆ, ಜಮೀರ್ ಅಹಮದ್, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಕೆ.ಎಚ್.ಮುನಿಯಪ್ಪ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.