ರಾಜ್ಯ ರಾಜಕೀಯದ ಅತ್ಯಂತ ಹಿರಿಯ ರಾಜಕಾರಣ ಕೆ.ಹೆಚ್.ಮುನಿಯಪ್ಪ ಅವರು, 1960ರಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಮುನ್ನುಡಿ ಬರೆದಿದ್ದರು. ಸದ್ಯ ಅವರು ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ.
ಇಂದು ನಡೆದ ಸಮಾರಂಭದಲ್ಲಿ ಕೆ.ಹೆಚ್. ಮುನಿಯಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ಮಾರ್ಚ್ 07, 1948ರಲ್ಲಿ ಜನಿಸಿದ್ದ ಅವರಿಗೆ ಸದ್ಯ 75 ವರ್ಷ ವಯಸ್ಸು. ವಕೀಲರಾಗಿ ಕಾರ್ಯನಿರ್ವಹಿಸಿದ್ದು, ಸಾಮಾಜಿಕ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೆ.ಹೆಚ್ ಮುನಿಯಪ್ಪ ಮೊದಲಿಗೆ 1978-83 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಳಘಟ್ಟದ ತಾಲೂಕು ವ್ಯವಸಾಯ ಸೇವಾ ಸಹಕಾರಿ ಬೋರ್ಡ್ನ ಉಪಧ್ಯಾಕ್ಷರಾಗಿ ಆಯ್ಕೆಯಾಗಿದ್ದರು. ನಂತರ 1991 ರಿಂದ ಕೋಲಾರ ಲೋಕಸಭಾ ಕ್ಷೇತ್ರದ ಮೇಲೆ ಪ್ರಬಲ ಹಿಡಿತ ಸಾಧಿಸಿರುವ ಮುನಿಯಪ್ಪ ಸತತವಾಗಿ ಏಳು ಬಾರಿ ಸಂಸದರಾಗಿ ಆಯ್ಕೆಯಾಗುವ ಮೂಲಕ ದಾಖಲೆ ಮಾಡಿದ್ದಾರೆ.
1991ರಲ್ಲಿ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಗಾಂಧಿ ಸಾವಿನ ಅನುಕಂಪದ ಅಲೆಯಲ್ಲಿ ಭರ್ಜರಿ ಜಯಗಳಿಸಿದ ಕೆ.ಹೆಚ್ ಮುನಿಯಪ್ಪ ಮತ್ತೆ ಹಿಂದೆ ತಿರುಗಿ ನೋಡಲೇ ಇಲ್ಲ. ಸತತವಾಗಿ ಆಯ್ಕೆಯಾಗುತ್ತಲೆ ಬಂದಿದ್ದಾರೆ. ಕ್ಷೇತ್ರದಲ್ಲಿ ಸತತ ಏಳುಬಾರಿ ಗೆಲುವನ್ನು ಸಾಧಿಸಿ ಸೋಲಿಲ್ಲದ ಸರದಾರನಾಗಿರುವ ಕೆ.ಹೆಚ್. ಮುನಿಯಪ್ಪನವರು, 2004 ರ ಲೋಕಸಭಾ ಚುನಾವಣೆಯಲ್ಲಿ 5ನೇ ಬಾರಿಗೆ ಕೋಲಾರದಿಂದ ಗೆದ್ದು, ಯುಪಿಎ ಸರ್ಕಾರದಲ್ಲಿ ಮೊದಲ ಬಾರಿಗೆ ಕೇಂದ್ರ ರಸ್ತೆ ಹಾಗೂ ಹೆದ್ದಾರಿ ರಾಜ್ಯ ಸಚಿವರಾಗಿ, 15ನೇ ಚುನಾವಣೆಯಲ್ಲಿ 6ನೇ ಬಾರಿ ಗೆಲುವು ದಾಖಲಿಸಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದರು. ಆದರೆ, 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲನ್ನು ಕಂಡಿದ್ದರು. ಪರಿಶಿಷ್ಟ ಜಾತಿ ಎಡಗೈ ಸಮುದಾಯದ ಪ್ರಮುಖ ಮುಖಂಡರಾಗಿ ಈಗ ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ.